ನ್ಯೂಸ್ ನಾಟೌಟ್ : ನಾನು ಪಕ್ಷ ಬಿಡುವುದಿಲ್ಲ. ಕಾಂಗ್ರೆಸ್ನಿಂದ ಆಹ್ವಾನ ಬಂದಿದ್ದು ನಿಜ. ಆದರೆ ನಾನು ಕಾಂಗ್ರೆಸ್ ಸೇರುವುದಿಲ್ಲ.ಬಿಜೆಪಿಯಲ್ಲೇ ಇದ್ದು ಶುದ್ದೀಕರಣದ ಕಡೆಗೆ ನಾನು ಗಮನ ನೀಡುತ್ತೇನೆ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿವಿ ಸದಾನಂದ ಗೌಡ (DV Sadananda Gowda) ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ಉತ್ತರಕ್ಷೇತ್ರದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಡಿವಿಎಸ್ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಒಂದು ಸುದ್ದಿ ಹರಡಿತ್ತು. ಈ ಸುದ್ದಿ ಬೆನ್ನಲ್ಲೇ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ನಾನು ಚುನಾವಣಾ ಕಣದಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದ್ದೆ. ಆಗ ಮಾಜಿ ಸಿಎಂ, ಮಾಜಿ ಡಿಸಿಎಂ ಬಂದು ಮನವೊಲಿಸಿದರು. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಬದಲಿ ಅಭ್ಯರ್ಥಿ ಬಂದ ಬಳಿಕ ಕುತೂಹಲ ಹೆಚ್ಚಾಯಿತು ಎಂದು ಹೇಳಿದರು.ಟಿಕೆಟ್ ಕೈತಪ್ಪಿದ್ದರಿಂದ ಬೇಸರವಾಗಿದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು” ಬೇಸರವಾಗಿದೆ ನಿಜ. ನನ್ನನ್ನು ಅವಮಾನಿಸಿದವರು ಮುಂದೆ ಪಶ್ಚಾತ್ತಾಪ ಅನುಭವಿಸುತ್ತಾರೆ. ಸಹಿಸಿಕೊಳ್ಳುವವರಿಗೆ ತಾಳ್ಮೆ ಇದ್ದರೆ, ದುಃಖ ಕೊಟ್ಟವರು ಇದ್ದೂ ಸತ್ತಂತೆ” ಎಂದು ತನ್ನನ್ನು ಅವಮಾನಿಸಿದವರ ವಿರುದ್ಧ ಆಕ್ರೋಶ ಹೊರಹಾಕಿದರು.
ಕರ್ನಾಟಕದಲ್ಲಿ ಮೋದಿ ಪರ ಅಲೆ ಸೃಷ್ಟಿಯಾಗಬೇಕು. ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದು ನನ್ನ ಅಭಿಲಾಷೆ. ಇದಕ್ಕಾಗಿ ಬಿಜೆಪಿ ಜನಪರವಾದ ಪಕ್ಷ ಆಗಬೇಕು ಎಂಬುದಷ್ಟೇ ನನ್ನ ಉದ್ದೇಶ. ಜನ ಒಪ್ಪಿಕೊಳ್ಳಬಲ್ಲ ಪಕ್ಷ ಆಗಬೇಕು ಎಂದರು.ಮೋದಿ ಅವರು ಹೇಳಿದಂತಹ ಪರಿವಾರವಾದ, ಮೋದಿ ಅವರು ಹೇಳಿದಂತಹ ಭ್ರಷ್ಟಾಚಾರವಾದ, ಮೋದಿ ಅವರು ಹೇಳಿದಂತಹ ಜಾತಿವಾದ ಕರ್ನಾಟಕದಲ್ಲಿ ಇರಬಾರದು. ಈ ಶುದ್ದೀಕರಣಕ್ಕೆ ವೇಗ ಕೊಡುವಂತದ್ದು ನನ್ನಿಂದ ಮಾತ್ರ ಸಾಧ್ಯ ಎಂದು ಹೇಳಿದರು.