ನ್ಯೂಸ್ ನಾಟೌಟ್: ದೇವರ ಮೇಲೆ ಅಪಾರ ಭಕ್ತಿ ಹೊಂದಿದ್ದ ಬಾಲಕಿಯೊಬ್ಬಳು ಶಾಲೆಯಿಂದ ದೇಗುಲಕ್ಕೆ ತೆರಳಿ ದೀಪ ಹಚ್ಚಿದ್ದು,ಬೆಂಕಿ ಬಟ್ಟೆಗೆ ತಗುಲಿ ದುರಂತ ಅಂತ್ಯ ಕಂಡಿದ್ದಾಳೆ. ತುಮಕೂರು ಜಿಲ್ಲೆ (Tumkur News) ಶಿರಾ ತಾಲ್ಲೂಕು ಗೌಡಗೆರೆ ಹೋಬಳಿ ಮೇಳಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿನಿ (First standard Student) ದೀಕ್ಷಾ ಕೊನೆಯುಸಿರೆಳೆದ ಬಾಲಕಿ ಎಂದು ತಿಳಿದು ಬಂದಿದೆ.
ಶಾಲೆಯಲ್ಲಿ ಮಧ್ಯಾಹ್ನದ ಊಟದ ವಿರಾಮದ ವೇಳೆ ಆಕೆ ಶಾಲೆಯ ಪಕ್ಕದಲ್ಲೇ ಇರುವ ದೇವಾಲಯದಲ್ಲಿ ದೀಪ ಹಚ್ಚಲು ಹೋಗಿದ್ದಳು. ಹಿರಿಯರು ಮಾಡುವ ಸಂಪ್ರದಾಯಗಳನ್ನು ಗಮನಿಸಿದ್ದ ಆಕೆ ಭಕ್ತಿಯಿಂದ ಈ ಕೆಲಸವನ್ನು ಮಾಡಿದ್ದಳು. ತನ್ನ ಜತೆಗೆ ತರಗತಿಯ ಇತರ ಕೆಲವು ಮಕ್ಕಳನ್ನು ಕೂಡಾ ಆಕೆ ಕರೆದುಕೊಂಡು ಹೋಗಿದ್ದಳು. ಮಾರ್ಚ್ 13ರಂದು ಘಟನೆ ನಡೆದಿತ್ತು.
ಆಕೆಯೊಂದಿಗೆ ಗೆಳತಿಯರು ಇದ್ದು, ಖುಷಿ ಖುಷಿಯಾಗಿ ಹೋಗಿ ದೇವರಿಗೆ ದೀಪ ಹಚ್ಚಿದ ಆಕೆ ಈ ಸಂಭ್ರಮದಲ್ಲಿ ಮೈಮರೆತಿದ್ದಳೋ ಗೊತ್ತಿಲ್ಲ. ಅಂತೂ ಆಕೆಯ ಬಟ್ಟೆಗೆ ಬೆಂಕಿ ಹತ್ತಿಕೊಂಡಿತ್ತು. ಬೆಂಕಿ ಬಟ್ಟೆಗೆ ತಗುಲಿ ಮೈಗೆ ಸುಟ್ಟ ಗಾಯಗಳಾಗಿತ್ತು. ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಬೆಂಗಳೂರಿನ ಆಸ್ಪತ್ರೆಗೂ ದಾಖಲಿಸಲಾಗಿತ್ತು. ಇದೀಗ ಆಕೆ ಚಿಕಿತ್ಸೆ ಫಲಿಸದೆ ಮಾರ್ಚ್ 19ರಂದು (ಮಂಗಳವಾರ) ಉಸಿರು ಚೆಲ್ಲಿದ್ದಾಳೆ.