ಕತ್ತೆಗಳನ್ನು ಕದ್ದ ಆರೋಪದಡಿ ಕಾಂಗ್ರೆಸ್ ನಾಯಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ತೆಲಂಗಾಣ ಎನ್ಎಸ್ಯುಐ (ಕಾಂಗ್ರೆಸ್ನ ಸ್ಟುಡೆಂಟ್ ಯೂನಿಯನ್) ಅಧ್ಯಕ್ಷ ವೆಂಕಟ್ ಬಲ್ಮೂರ್ ಎಂಬುವರು ಬಂಧಿತರು. ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಹುಟ್ಟುಹಬ್ಬದ ದಿನ ಇವರು ಕತ್ತೆಯೊಂದಿಗೆ ಕೆಸಿಆರ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅದರ ಬೆನ್ನಲ್ಲೇ ಇಂಥದ್ದೊಂದು ದೂರು ದಾಖಲಾಗಿದೆ. ವೆಂಕಟ್ ಬಲ್ಮೂರ್ ಜತೆಗೆ ಇನ್ನಿತರ ಕೆಲವರ ಹೆಸರನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಅವರೆಲ್ಲರೂ ಪರಾರಿಯಾಗಿದ್ದಾರೆ.
ತೆಲಂಗಾಣ ಎನ್ಎಸ್ಯುಐ ವೆಂಕಟ್ ಬಲ್ಮೂರ್ ವಿರುದ್ಧ ಜಮ್ಮಿಕುಂಟಾ ಅಧ್ಯಕ್ಷ ತಂಗುಟೋರಿ ರಾಜ್ಕುಮಾರ್ ಎಂಬುವರು ದೂರು ದಾಖಲಿಸಿದ್ದರು. ನನ್ನ ಕತ್ತೆಗಳನ್ನು ಕದ್ದಿದ್ದಾರೆ ಎಂದು ವೆಂಕಟ್ ಬಲ್ಮೂರು ಸೇರಿ ಏಳು ಮಂದಿಯ ವಿರುದ್ಧ ದೂರು ಕೊಟ್ಟಿದ್ದರು. ಕಾನೂನುಬಾಹಿರ ಸಭೆ, ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ, ಕಳ್ಳತನ ಮತ್ತು ಪ್ರಾಣಿಗಳ ಮೇಲೆ ಕ್ರೌರ್ಯ ತೋರಿದ ಆರೋಪದಡಿ ಇವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.