ನ್ಯೂಸ್ ನಾಟೌಟ್: ಇಪ್ಪತ್ತು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯನ್ನು ಕರ್ನಾಟಕದಿಂದ ಘೋಷಿಸಿದ್ದು, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಸ್ವಪಕ್ಷೀಯರ ಅಸಮಾದಾನ ಜೋರಾಗಿದೆ. ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಬಂಡಾಯವಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಅವರನ್ನು ಭೇಟಿಯಾಗಲು ಬಂದಿದ್ದ ಕರ್ನಾಟಕ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ಅವರನ್ನು ನಾನು ಸ್ಪರ್ಧಿಸುವುದು ಸ್ಪಷ್ಟ ಎಂದು ಹೇಳಿ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.
ಈ ನಡುವೆ ದಕ್ಷಿಣ ಕನ್ನಡದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸತ್ಯಜಿತ್ ಸುರತ್ಕಲ್, ಬಂಡಾಯವಾಗಿ ಸ್ಪರ್ಧಿಸುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈಶ್ವರಪ್ಪ ಪಕ್ಷೇತರರಾಗಿ ಶಿವಮೊಗ್ಗದಿಂದ ಸ್ಪರ್ಧಿಸೋದಿಕ್ಕೆ ಸಿದ್ಧತೆ ಮಾಡಿಕೊಂಡಿರುವ ಹೊತ್ತಿನಲ್ಲಿ ಅವರ ನಿವಾಸಕ್ಕೆ ತೆರಳಿ, ಸತ್ಯಜಿತ್ ಅವರಿಗೆ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ. ಸತ್ಯಜಿತ್ ನಳಿನ್ ಕುಮಾರ್ ಕಟೀಲ್, ಅರುಣಾ ಶ್ಯಾಂ, ಅರುಣ್ ಕುಮಾರ್ ಪುತ್ತಿಲ ಅವರಂತೇ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಬಿಜೆಪಿಯು ಈಗಾಗಲೇ ಕ್ಯಾ. ಬೃಜೇಶ್ ಚೌಟಗೆ ಟಿಕೆಟ್ ನೀಡಿದೆ.
” ನನಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ, ಹಾಗೇನಾದರೂ ಇದ್ದರೆ ಕಳೆದ ಚುನಾವಣೆಯಲ್ಲಿ ನಳಿನ್ ಕಟೀಲ್ ವಿರುದ್ದ ಸ್ಪರ್ಧಿಸುತ್ತಿದ್ದೆ. ನನ್ನ ಸ್ಪರ್ಧೆಯಿಂದ ಅಲ್ಪಸಂಖ್ಯಾತ ಅಭ್ಯರ್ಥಿ ಗೆದ್ದಂತಾಯಿತು ಎನ್ನುವ ಕಪ್ಪುಚುಕ್ಕೆ ನನಗೆ ಬೇಡ ಎನ್ನುವ ಕಾರಣಕ್ಕಾಗಿ ನಾನು ಕಳೆದ ಚುನಾವಣೆಯಲ್ಲಿ ನಾನು ಸ್ಪರ್ಧಿಸಲಿಲ್ಲ ” ಎಂದು ಸತ್ಯಜಿತ್ ಸುರತ್ಕಲ್ ಹೇಳಿಕೆ ನೀಡಿದ್ದು, ತೆರೆ ಮರೆಯಲ್ಲಿ ನಡೆಯುತ್ತಿರುವ ಸಿದ್ಧತೆಗಳು ಸತ್ಯಜಿತ್ ಸುರತ್ಕಲ್ ಪಕ್ಷೇತರರಾಗಿ ಸ್ಪರ್ಧಿಸುವ ಸುಳಿವು ನೀಡಿದೆ ಎನ್ನಲಾಗುತ್ತಿದೆ.