ನ್ಯೂಸ್ ನಾಟೌಟ್: ಚಾರ್ಮಾಡಿ ಘಾಟಿಯಲ್ಲಿ 16 ಚಕ್ರದ ಲಾರಿ ಕೆಟ್ಟು ನಿಂತ ಪರಿಣಾಮ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದೆ. ಈಗ ತೆರವಿನ ಕಾರ್ಯ ನಡೆಸುತ್ತಿದ್ದಾರೆ. ಹುಬ್ಬಳ್ಳಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಸಿಮೆಂಟ್ ಲಾರಿ ಬೆಳಗ್ಗೆ 8:30ರ ವೇಳೆಗೆ ಚಾರ್ಮಾಡಿ ಘಾಟಿಯ 10ನೇ ತಿರುವಿನಲ್ಲಿ ಕೆಟ್ಟು ನಿಂತಿದೆ.
ಘಾಟಿಯ ತಿರುವಿನಲ್ಲಿ ಟರ್ನ್ ಮಾಡಲಾಗದೇ ಲಾರಿ ನಿಂತ ಕಾರಣ ಮುಂದೆಯೂ ಹೋಗಲಾಗದೆ, ಹಿಂದೆಯೂ ಹೋಗಲಾಗದೆ ವಾಹನಗಳ ಚಾಲಕರು ಈಗ ಪರದಾಡುತ್ತಿದ್ದಾರೆ. ಚಿಕ್ಕಮಗಳೂರು-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿನಲ್ಲಿ 10 ಚಕ್ರದ ವಾಹನಕ್ಕಿಂತ ದೊಡ್ಡ ವಾಹನಗಳು ಸಂಚಾರಕ್ಕೆ ನಿಷೇಧವಿದೆ. ಹೀಗಿದ್ದರೂ ಕೊಟ್ಟಿಗೆಹಾರ (Kottigehara) ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಇದ್ದರೂ ಈ ಲಾರಿಗೆ ಅನುಮತಿ ನೀಡಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ. ಪೊಲೀಸರು ವಾಹನ ಬಿಟ್ಟಿರುವುದಕ್ಕೆ ಸ್ಥಳೀಯರು ಅಸಮಾಧಾನಗೊಂಡಿದ್ದು ಬೆಳಗ್ಗೆಯಿಂದಲೂ ನೂರಾರು ವಾಹನ ಸವಾರರು ಪರದಾಡುತ್ತಿದ್ದಾರೆ.