ನ್ಯೂಸ್ ನಾಟೌಟ್: ಮೊದಲ ಬಾರಿಗೆ ಶಾಲಾ ಶಿಕ್ಷಕಿಯರಿಗೂ ವಸ್ತ್ರಸಂಹಿತೆ ಜಾರಿ ಮಾಡಿ ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ. ಈ ಸಂಹಿತೆಯ ಪ್ರಕಾರ, ಶಿಕ್ಷಕಿಯರು ಜೀನ್ಸ್ ಹಾಗೂ ಟಿ-ಶರ್ಟ್, ಕಡುಬಣ್ಣದ ಬಟ್ಟೆಗಳು ಅಥವಾ ಡಿಸೈನ್ ಅಥವಾ ಪ್ರಿಂಟ್ ಹೊಂದಿರುವ ಉಡುಪುಗಳನ್ನು ಧರಿಸುವಂತಿಲ್ಲ. ಶಿಕ್ಷಕಿಯರು ಸಲ್ವಾರ್ ಅಥವಾ ಚೂಡಿದಾರ್ ಗಳನ್ನು ಕುರ್ತಾ ಮತ್ತು ದುಪ್ಪಟಾ ಸಹಿತವಾಗಿ ಧರಿಸಬೇಕು ಅಥವಾ ಸೀರೆ ಉಡಬೇಕು. ಪುರುಷರು ಶರ್ಟ್ ಮತ್ತು ಪ್ಯಾಂಟ್ ಧರಿಸಿ ಇನ್ಶರ್ಟ್ ಮಾಡಬೇಕು ಎಂದು ತಿಳಿಸಿದೆ.
ಶಾಲಾ ಶಿಕ್ಷಣ ಇಲಾಖೆ ಈ ಸಂಬಂಧ ಸರ್ಕಾರಿ ನಿರ್ಣಯವನ್ನು ಶುಕ್ರವಾರ(ಮಾರ್ಚ್ ೧೫) ಬಿಡುಗಡೆ ಮಾಡಿದ್ದು, ಶಿಕ್ಷಕರ ನಡವಳಿಕೆಗಳು ಮಕ್ಕಳ ಮೇಲೆ ಪರಿಣಾಮ ಬೀರುವುದರಿಂದ ಶಿಕ್ಷಕರು ತಮ್ಮ ಉಡುಪಿನಲ್ಲಿ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. ಅಸಮರ್ಪಕವಾದ ಬಟ್ಟೆಗಳನ್ನು ಶಿಕ್ಷಕರು ಧರಿಸಿದಲ್ಲಿ ಅದು ಶಾಲಾ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಉನ್ನತ ಅಧಿಕಾರಿಯೊಬ್ಬರು “ಇದು ಕೇವಲ ಮಾರ್ಗಸೂಚಿ. ಇದನ್ನು ಕಡ್ಡಾವೆಂದು ಪರಿಗಣಿಸಬೇಕಾಗಿಲ್ಲ. ಇದನ್ನು ಅನುಸರಿಸದಿದ್ದರೆ, ಯಾವುದೇ ಕ್ರಮ ಕೈಗೊಳ್ಳುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ” ಎಂದು ಹೇಳಿದ್ದಾರೆ ಎನ್ನಲಾಗಿದೆ.