ನ್ಯೂಸ್ ನಾಟೌಟ್ : ಹಣ್ಣು-ತರಕಾರಿಗಳನ್ನು ಹೆಚ್ಚು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂಬ ಮಾತಿದೆ. ನಮ್ಮ ಆರೋಗ್ಯಕ್ಕೆ ಬಹಳ ಅದ್ಭುತವಾದ ಆಹಾರಗಳು ಹಣ್ಣು ತರಕಾರಿಗಳೇ. ನೈಸರ್ಗಿಕ ಸ್ವರೂಪದ ಇವುಗಳನ್ನು ಯಾವುದೇ ರೂಪದಲ್ಲಿ ಸೇವಿಸಿದರೂ ಆರೋಗ್ಯಕ್ಕೆ ತುಂಬಾ ತುಂಬಾ ಒಳ್ಳೆಯದು.ಹೀಗಾಗಿ ಹೆಚ್ಚಿನವರು ಇದನ್ನು ಸೇವಿಸುತ್ತಾರೆ.
ಹೀಗೆ ಯಾವುದೇ ಅಡ್ಡ ಪರಿಣಾಮಗಳು ಇಲ್ಲದೇ ಇರುವ ಹಣ್ಣು ತರಕಾರಿಗಳಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ. ಹಾಗಾಗಿ ಬೇಸಿಗೆ ದಿನಗಳಲ್ಲಿ ನಮ್ಮ ಆರೋಗ್ಯದ ಮೇಲೆ ಇವು ಅದ್ಭುತವಾಗಿ ಕೆಲಸ ಮಾಡುತ್ತವೆ.ಅದರಲ್ಲೂ ಪೌಷ್ಟಿಕಾಂಶಗಳ ಪ್ರಮಾಣ ಹೇರಳವಾಗಿ ಕಂಡು ಬರುವ ಹಣ್ಣುಗಳಲ್ಲಿ ದಾಳಿಂಬೆ ಹಣ್ಣು ಕೂಡ ಒಂದು. ದಾಳಿಂಬೆ ಹಣ್ಣಿನ ಆರೋಗ್ಯಕರ ಗುಣಗಳು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿದರೆ ಸಿಗುವಂತಹ ಪ್ರಯೋಜನಗಳು ಅಪಾರ.ಹಾಗಾದರೆ ದಾಳಿಂಬೆ ಸೇವನೆಯಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ..
೧.ಮನೆ ಮದ್ದುಗಳ ರೂಪದಲ್ಲಿ ಕೂಡ ದಾಳಿಂಬೆ ಹಣ್ಣಿನ ಜ್ಯೂಸ್ ಕೆಲಸ ಮಾಡುತ್ತದೆ. ನಮ್ಮ ಕೆಟ್ಟು ಹೋದ ಜೀರ್ಣಾಂಗ ವ್ಯವಸ್ಥೆಯನ್ನು ಸರಿ ಪಡಿಸುವಲ್ಲಿ ದಾಳಿಂಬೆ ಹಣ್ಣಿನ ಜ್ಯೂಸ್ ನಿರಂತರವಾಗಿ ಕಾರ್ಯ ನಿರ್ವಹಿಸುತ್ತದೆ. ಉತ್ತಮ ಜೀರ್ಣಾಂಗ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ದಾಳಿಂಬೆ ಹಣ್ಣು ಕೆಲಸ ಮಾಡುತ್ತದೆ.
೨. ಈ ನಿಟ್ಟಿನಲ್ಲಿ ನಡೆದ ಹಲವಾರು ಸಂಶೋಧನೆಗಳು ನೀಡಿರುವ ವರದಿಯ ಪ್ರಕಾರ ದಾಳಿಂಬೆ ಹಣ್ಣಿನ ಜ್ಯೂಸ್ ಪ್ರತಿದಿನ ಸೇವನೆ ಮಾಡುವುದರಿಂದ ನಮ್ಮ ರಕ್ತದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣ ಸಾಕಷ್ಟು ಕಡಿಮೆಯಾಗುತ್ತದೆ.
೩.ದಾಳಿಂಬೆ ಹಣ್ಣಿನಲ್ಲಿ ನಿಂಬೆಹಣ್ಣಿನಂತೆ ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ನೆರವಾಗಿ ಯಾವುದೇ ತರಹದ ಸಣ್ಣ ಪುಟ್ಟ ಸೋಂಕುಗಳು ಹಾಗೂ ಇನ್ನಿತರ ವೈರಸ್ ಪ್ರಭಾವದಿಂದ ನಮ್ಮನ್ನು ರಕ್ಷಿಸುತ್ತದೆ.
೪. ಪ್ರತಿದಿನ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ನಮ್ಮ ಆರೋಗ್ಯದಲ್ಲಿ ಸಾಕಷ್ಟು ಒಳ್ಳೆಯ ಬದಲಾವಣೆಗಳು ಉಂಟಾಗುತ್ತವೆ.ಬಿಸಿಲಿನ ಕಾಲದಲ್ಲಿ ದೇಹಕ್ಕೆ ಒಳ್ಳೆಯ ನೀರಿನ ಅಂಶ ಸಿಗುವುದರ ಜೊತೆಗೆ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ನಮ್ಮ ಇಡೀ ದಿನ ತಾಜಾ ಆಗಿರಲು ಇದು ನೆರವಾಗುತ್ತದೆ.
೫. ಇದರಿಂದ ರಕ್ತದ ಒತ್ತಡ ಕೂಡ ಕಡಿಮೆಯಾಗಿ ಹೃದಯದ ಅಪ ಧಮನಿಗಳಿಗೆ ರಕ್ತ ಸಂಚಾರ ಹೆಚ್ಚಾಗುತ್ತದೆ. ಹೀಗಾಗಿ ಇದು ನಮ್ಮ ಹೃದಯವನ್ನು ಬಲಪಡಿಸುತ್ತದೆ ಜೊತೆಗೆ ಹೃದಯಕ್ಕೆ ಸಂಬಂಧ ಪಟ್ಟಂತೆ ಇರುವಂತಹ ಸಮಸ್ಯೆಗಳನ್ನು ದೂರ ಮಾಡುತ್ತೆ.