ನ್ಯೂಸ್ ನಾಟೌಟ್: “ಕೆನಡಾದಲ್ಲಿ ನಡೆದ ಖಲಿಸ್ತಾನ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯ ಇಲ್ಲ” ಎಂದು ನ್ಯೂಜಿಲೆಂಡ್ನ ಉಪಪ್ರಧಾನಿ ವಿನ್ಸ್ಟನ್ ಪೀಟರ್ಸ್ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದಿರುವ ಖಲಿಸ್ತಾನಿ ಭಯೋತ್ಪಾದಕ, ಕೆನಡಾ ನಿವಾಸಿ ಗುರುಪತ್ವಂತ್ ಸಿಂಗ್ ಪನ್ನುನ್, ನ್ಯೂಜಿಲ್ಯಾಂಡ್ನ ಉಪಪ್ರಧಾನಿಗೇ ಬೆದರಿಕೆ ಒಡ್ಡಿದ್ದಾನೆ.
ಖಲಿಸ್ತಾನ್ ಪರ ಚಟುವಟಿಕೆಗಳಿಂದ ಸುದ್ದಿಯಲ್ಲಿರುವ ಪನ್ನುನ್ ಕಳೆದ ವಾರ ಕೆನಡಾದಲ್ಲಿ ಭಾರತದ ಉನ್ನತ ರಾಜತಾಂತ್ರಿಕರ ವಿರುದ್ಧ ಹಿಂಸಾತ್ಮಕ ದಾಳಿಯನ್ನು ಸೂಚಿಸುವ ಪೋಸ್ಟರ್ ಅನ್ನು ಪ್ರಕಟಿಸಿದ್ದ. ʼಸಿಖ್ ಫಾರ್ ಜಸ್ಟಿಸ್ʼ ಸಂಘಟನೆಯ ನಾಯಕನಾಗಿರುವ ಪನ್ನುನ್, ನಿಜ್ಜರ್ ಪ್ರಕರಣದಲ್ಲಿ ಪೀಟರ್ಸ್ ಭಾರತಕ್ಕೆ ನೀಡಿರುವ ಬೆಂಬಲವನ್ನು ಸಹಿಸಿಲ್ಲ. ಹಲವು ತಿಂಗಳುಗಳಿಂದ ವಿವಾದವನ್ನು ಹುಟ್ಟುಹಾಕುತ್ತಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಪನ್ನುನ್, ಇದೀಗ ನ್ಯೂಜಿಲೆಂಡ್ನಲ್ಲಿರುವ ಭಾರತೀಯ ರಾಜತಾಂತ್ರಿಕರ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಕಳೆದ ವರ್ಷ ಕೆನಡಾದ ಸರ್ರೆಯಲ್ಲಿ ನಡೆದ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆನ್ಸಿಗಳ ಕೈವಾಡವಿದೆ ಎಂದು ಕೆನಡಾ ಆರೋಪಿಸಿತ್ತು. ಇದರ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದ ಭಾರತ, ಕೆನಡಾದ ಬಳಿ ಇರಬಹುದಾದ ಸಾಕ್ಷ್ಯಗಳನ್ನು ಒದಗಿಸುವಂತೆ ಕೇಳಿತ್ತು. ಸಾಕ್ಷ್ಯಗಳನ್ನು ನೀಡಲಾಗಿದೆ ಎಂದು ಕೆನಡಾ ಹೇಳಿದೆ. ಆದರೆ ಆ ಸಾಕ್ಷ್ಯಗಳಲ್ಲಿ ಭಾರತೀಯ ಏಜೆಂಟ್ಗಳ ಆಪಾದಿತ ಒಳಗೊಳ್ಳುವಿಕೆಯನ್ನು ದೃಢೀಕರಿಸುವ ನಿರ್ಣಾಯಕ ಪುರಾವೆಗಳು ಇಲ್ಲ ಎಂದು ನ್ಯೂಜಿಲೆಂಡ್ ಉಪ ಪ್ರಧಾನಿ ವಿನ್ಸ್ಟನ್ ಪೀಟರ್ಸ್ ಹೇಳಿದ್ದಾರೆ. ನಾಲ್ಕು ದಿನಗಳ ಭೇಟಿಗಾಗಿ ಭಾರತದಲ್ಲಿರುವ ಪೀಟರ್ಸ್, ಸಂದರ್ಶನವೊಂದರಲ್ಲಿ ಈ ಮಾತನ್ನು ಹೇಳಿದ್ದರು. ಕೆನಡಾ ಪ್ರಸ್ತುತಪಡಿಸಿದ ಪುರಾವೆಗಳನ್ನು ಪೀಟರ್ಸ್ ಬಹಿರಂಗವಾಗಿ ಪ್ರಶ್ನಿಸಿದ್ದರು. “ತರಬೇತಿ ಪಡೆದ ವಕೀಲನಾಗಿ ನಾನು ಸರಿಯಾಗಿ ನೋಡಬಲ್ಲೆ. ಇಲ್ಲಿ ಪ್ರಕರಣದ ಸಾಕ್ಷಿ ಎಲ್ಲಿದೆ? ಒಂದೂ ಇಲ್ಲ” ಎಂದು ಅವರು ಹೇಳಿದ್ದಾರೆ.