ನ್ಯೂಸ್ ನಾಟೌಟ್: ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಶಿರಾಡಿಘಾಟ್ ಬಳಿ ಬುಧವಾರ ಬೆಳಿಗ್ಗೆ(ಮಾ.13) ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದಿದ್ದು, ಎಲ್ಪಿಜಿ ಸೋರಿಕೆಯಾಗುತ್ತಿದೆ ಎಂದು ವರದಿ ತಿಳಿಸಿದೆ.
ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿ ಬಂದ್ ಮಾಡಲಾಗಿದೆ. ಟ್ಯಾಂಕರ್ನಿಂದ ಆಗುತ್ತಿರುವ ಅನಿಲ ಸೋರಿಕೆಯಿಂದ ಅಗ್ನಿ ಅನಾಹುತ ಸಂಭವಿಸುವುದನ್ನು ತಪ್ಪಿಸಲು ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಸಕಲೇಶಪುರ ತಾಲ್ಲೂಕಿನ, ಶಿರಾಡಿಘಾಟ್ ರಸ್ತೆಯ ಡಬಲ್ ಟರ್ನ್ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ಉರುಳಿ ಬಿದ್ದಿದೆ. ಪೊಲೀಸರು ಸಂಚಾರ ಬಂದ್ ಮಾಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು-ಹಾಸನ-ಮಂಗಳೂರು, ಮಂಗಳೂರು-ಹಾಸನ-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ಪೊಲೀಸರು ಬದಲಿ ಮಾರ್ಗದಲ್ಲಿ ಕಳುಹಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ರಾತ್ರಿ 12 ರವರೆಗೆ ಸಂಚಾರ ಸ್ಥಗಿತ: ರಾಷ್ಟ್ರೀಯ ಹೆದ್ದಾರಿ –75 ರಲ್ಲಿ ಬುಧವಾರ ಮಧ್ಯರಾತ್ರಿ 12 ಗಂಟೆಯವರೆಗೆ ವಾಹನಗಳ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.
ಸಕಲೇಶಪುರದಿಂದ ಮಂಗಳೂರಿಗೆ ತೆರಳುವ ವಾಹನಗಳು ಸಕಲೇಶಪುರ–ಹಾನಬಾಳು–ಮೂಡಿಗೆರೆ ಮಾರ್ಗವಾಗಿ ಮಂಗಳೂರಿಗೆ ಸಂಚರಿಸಬೇಕು. ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ವಾಹನಗಳು ಹಾಸನ–ಬೂವನಹಳ್ಳಿ ಕ್ರಾಸ್–ಬೇಲೂರು ಮೂಲಕ ಸಂಚರಿಸಬೇಕು. ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ವಾಹನಗಳು ಸುಳ್ಯ–ಸಂಪಾಜೆ ಮಾರ್ಗವಾಗಿ ಸಂಚರಿಸುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಆದೇಶ ಮಾಡಿದ್ದಾರೆ ಎನ್ನಲಾಗಿದೆ.