ನ್ಯೂಸ್ ನಾಟೌಟ್: ಚಾರ್ಟೆಡ್ ಅಕೌಂಟೆಂಟ್ ಗೆ ತೀವ್ರ ಹಣಕಾಸಿನ ಸಮಸ್ಯೆ ಎದುರಾಗಿತ್ತು. ಈ ಸಮಸ್ಯೆಗಳಿಂದ ಹೊರ ಬರಲು ಆತ ತನ್ನ ಕಿಡ್ನಿ ಮಾರಲು ಯೋಚಿಸಿದ್ದ. ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದರೂ ಕೂಡಾ ಈ ಭೂಪನಿಗೆ ಕಿಡ್ನಿ ಸೇರಿದಂತೆ ಮಾನವ ದೇಹದ ಅಂಗಾಂಗ ಮಾರಾಟ ಕಾನೂನು ಬಾಹಿರ ಅನ್ನೋದೇ ಗೊತ್ತಿರಲಿಲ್ಲ ಎಂದು ಹೇಳಲಾಗಿದೆ.
ಇನ್ನು ನನ್ನ ಕಿಡ್ನಿ ಮಾರಾಟಕ್ಕಿದೆ ಎಂದು ಆನ್ಲೈನ್ನಲ್ಲಿ ಹುಡುಕಾಟ ನಡೆಸಿದ ಈತ ಇದೀಗ 6.20 ಲಕ್ಷ ರೂ. ಹಣ ಕಳೆದುಕೊಂಡಿದ್ದಾನೆ. ಹಣ ಕಳೆದುಕೊಂಡ ವ್ಯಕ್ತಿ ಬೆಂಗಳೂರಿನ ನಿವಾಸಿ ಎನ್ನಲಾಗಿದೆ. ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿರುವ ಆತ, ಕಿಡ್ನಿ ಮಾರಾಟಕ್ಕೆ ಮುಂದಾಗಿ ತಾನು ಹಣ ಕಳೆದುಕೊಂಡಿದ್ದು ಹೇಗೆ ಎಂದು ವಿವರಿಸಿದ್ದಾರೆ. ಫೆಬ್ರವರಿ 28 ರಂದು ಇಂಟರ್ನೆಟ್ನಲ್ಲಿ ಕಿಡ್ನಿ ಮಾರಾಟ ಕುರಿತಾಗಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಅವರಿಗೆ https://kidneysuperspecialist.org ಎಂಬ ಜಾಲ ತಾಣ ವಿಳಾಸ ಸಿಕ್ಕಿತು.
ಜೊತೆಯಲ್ಲೇ ಮೊಬೈಲ್ ನಂಬರ್ 9631688773 ಕೂಡಾ ಸಿಕ್ಕಿತು. ಈ ನಂಬರ್ಗೆ ಕರೆ ಮಾಡಿದಾಗ ಸ್ವೀಕರಿಸಿದ ವ್ಯಕ್ತಿ ವಾಟ್ಸಪ್ ಮೂಲಕ ಮೆಸೇಜ್ ಕಳಿಸಲು ಹೇಳಿದ. ಮೆಸೇಜ್ ಮಾಡಿದ ಬಳಿಕ ಈತ ಹೆಸರು, ವಯಸ್ಸು, ವಿಳಾಸ, ರಕ್ತದ ಗುಂಪು ಸೇರಿದಂತೆ ಹಲವು ಮಾಹಿತಿ ಕಲೆ ಹಾಕಿದ ಸೈಬರ್ ಕಳ್ಳರು, ಈತನಿಗೆ ದೊಡ್ಡ ಆಮಿಷವನ್ನೇ ಒಡ್ಡಿದರು. ನಿಮ್ಮ ರಕ್ತದ ಗುಂಪು AB ನೆಗೆಟಿವ್ ಆದ ಕಾರಣ ನಿಮ್ಮ ಕಿಡ್ನಿಗೆ 2 ಕೋಟಿ ರೂ. ಸಿಗುತ್ತೆ ಎಂದರು. ಕಿಡ್ನಿ ತೆಗೆದುಕೊಳ್ಳುವ ಮುನ್ನ ಅರ್ಧ ಹಣವನ್ನು ಅಡ್ವಾನ್ ರೂಪದಲ್ಲಿ ನೀಡುತ್ತೇವೆ ಎಂದರು. ಇದಕ್ಕಾಗಿ ಆಧಾರ್, ಪಾನ್ ಕಾರ್ಡ್ ಮಾಹಿತಿ ಪಡೆದ ಸೈಬರ್ ಕ್ರಿಮಿನಲ್ಗಳು, ಮೊದಲಿಗೆ ದಾಖಲೆ ಪರಿಶೀಲನೆಗೆ 8 ಸಾವಿರ ರೂ. ಹಣ ನೀಡುವಂತೆ ಹೇಳಿದರು. ನಂತರ ನಿಮ್ಮ ಹೆಸರಿಗೆ ಪರ್ಚೇಸ್ ಕೋಡ್ ಒಂದನ್ನು ಸೃಷ್ಟಿಸಲು 20 ಸಾವಿರ ರೂ. ಹಣ ನೀಡುವಂತೆ ಕೇಳಿದರು. ಇದಾದ ಬಳಿಕ ಕೋಡ್ ಆಪರೇಟ್ ಮಾಡಲು 80 ಸಾವಿರ ರೂ. ಹಣ ಕೇಳಿದರು.
ಅವರು ಕೇಳಿದಾಗಲೆಲ್ಲಾ ಈತ ಹಣ ನೀಡುತ್ತಾ ಬಂದರು. ಬಳಿಕ ಮಾರ್ಚ್ 2 ರಂದು ಕರೆ ಮಾಡಿದ ದುಷ್ಕರ್ಮಿಗಳು, ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸುವ ಮುನ್ನ ತೆರಿಗೆ ಕಡಿತ ಮಾಡಿಕೊಳ್ಳಬೇಕು. ಇದಕ್ಕಾಗಿ 5 ಲಕ್ಷ ರೂ. ಹಣವನ್ನು ಕಳಿಸಿ ಎಂದು ಹೇಳಿದರು. ಈತ ಆ ಹಣವನ್ನೂ ನೀಡಿದರು. ಮಾರನೇ ದಿನ ಮಹಿಳೆಯೊಬ್ಬರು ಕರೆ ಮಾಡಿದರು. ತನ್ನನ್ನು ತಾನು ಭಾರತೀಯ ಸ್ಟೇಟ್ ಬ್ಯಾಂಕ್ನ ಅಧಿಕಾರಿ ಎಂದು ಪರಿಚಯಿಸಿಕೊಂಡರು. ನೀವು ಮಾದಕ ವಸ್ತು ನಿಗ್ರಹ ಹಾಗೂ ಭಯೋತ್ಪಾದನೆ ಸಂಬಂಧಿ ನಿರಪೇಕ್ಷಣಾ ಪತ್ರ ಪಡೆಯಬೇಕು. ಇದಕ್ಕಾಗಿ 7.6 ಲಕ್ಷ ರೂ. ಹಣ ಪಾವತಿ ಮಾಡಿ ಎಂದು ಬೇಡಿಕೆ ಇಟ್ಟರು. ಇದರಿಂದ ಅನುಮಾನಗೊಂಡ ಈತ ಕೂಡಲೇ ಈ ವಿಷಯವನ್ನು ತಮ್ಮ ಸಹೋದ್ಯೋಗಿಗಳಿಗೆ ಹೇಳಿದರು. ಬಳಿಕ ಸಹೋದ್ಯೋಗಿಗಳು ಪರಿಶೀಲನೆ ನಡೆಸಿದಾಗ ಇದೊಂದು ಸೈಬರ್ ಕ್ರೈಂ ದಂಧೆ ಅನ್ನೋದು ಅರಿವಿಗೆ ಬಂತು. ಕೂಡಲೇ ಪೊಲೀಸರಿಗೆ ದೂರ ನೀಡಿದ ಅವರಿಗೆ ಕಿಡ್ನಿ ಮಾರಾಟವೇ ಅಪರಾಧ ಅನ್ನೋದನ್ನ ಪೊಲೀಸರು ಮನವರಿಕೆ ಮಾಡಿಕೊಟ್ಟರು. ಆದರೆ, ಸಾಲ ತೀರಿಸಲು ಹೀಗೆ ಮಾಡಿದೆ ಎಂದು ಹೇಳಿದಾಗ ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆಗೆ ಮುಂದಾಗಿದ್ದಾರೆ ಎಂದು ವರದಿ ತಿಳಿಸಿದೆ.