ನ್ಯೂಸ್ ನಾಟೌಟ್: ಸಂಪಾಜೆ ಗ್ರಾಮದ ರಕ್ಷಣೆಗೆ ನಿಂತಿರುವ ಹಲವು ದೇವರ ಪೈಕಿ ಅನಾದಿ ಕಾಲದಿಂದಲೂ ಜನ ನಂಬಿಕೊಂಡು ಭಕ್ತಿಯಿಂದ ಆರಾಧಿಸುತ್ತಿರುವ ಕೊಡಗು ಸಂಪಾಜೆಯ ಪಂಚಲಿಂಗೇಶ್ವರ ಸನ್ನಿಧಿಯೂ ಒಂದು. ಈ ಸನ್ನಿಧಿಯಲ್ಲಿ ನೆಲೆಯಾಗಿರುವ ಪಂಚಲಿಂಗೇಶ್ವರ ನಂಬಿದವರನ್ನು ಎಂದೂ ಕೈ ಬಿಟ್ಟಿಲ್ಲ ಅನ್ನೋದು ಭಕ್ತರ ನಂಬಿಕೆ. ಆತನ ಸನ್ನಿಧಾನದಲ್ಲಿ ವರ್ಷಂಪ್ರತಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ಅಂತೆಯೇ ಇತ್ತೀಚೆಗೆ ಅದ್ಧೂರಿ ಶಿವರಾತ್ರಿಯ ಆಚರಣೆಯನ್ನೂ ಮಾಡಲಾಯಿತು. ಈ ಕಾರ್ಯಕ್ರಮದ ಬಳಿಕ ವನಭೋಜನವೂ ನಡೆಯಿತು. ಹಲವಾರು ಮಂದಿ ಭಕ್ತರು ಕಾರ್ಯಕ್ರಮದಲ್ಲಿ ವಿಶೇಷವಾಗಿ ಭಾಗವಹಿಸಿ ದೇವರ ಮೃಷ್ಟಾನ್ನ ಪ್ರಸಾದವನ್ನು ಸ್ವೀಕರಿಸಿದರು.
ಏನಿದು ವನಭೋಜನ..?
ಶಿವರಾತ್ರಿ ಕಳೆದು ಮೊದಲ ಮಂಗಳವಾರ ಅಥವಾ ಶುಕ್ರವಾರ ದೇವಸ್ಥಾನದಿಂದ ಅಣತಿ ದೂರದಲ್ಲಿರುವ ಪಯಸ್ವಿನಿ ನದಿಯ ಪಕ್ಕದಲ್ಲಿರುವ ವನ ದುರ್ಗೆ ಮತ್ತು ವನಶಾಸ್ತಾರ ಕಟ್ಟೆಯಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ. ಬಳಿಕ ವಿಶೇಷ ಭೋಜನವನ್ನು ಭಕ್ತರಿಗೆ ನೀಡಲಾಗುತ್ತದೆ. ಇದನ್ನು ವನಭೋಜನ ಅಂತ ಕರೆಯುತ್ತಾರೆ. ಅನಾದಿ ಕಾಲದಿಂದಲೂ ಈ ಆಚರಣೆ ನಡೆದುಕೊಂಡು ಬರುತ್ತಿರುವುದು ವಿಶೇಷ. ವನಭೋಜನದ ರುಚಿ ಮೃಷ್ಟಾನ್ನದ ಅನುಭವವನ್ನೇ ನೀಡುತ್ತದೆ ಅನ್ನುವುದು ಪ್ರಸಾದ ಸವಿದ ಭಕ್ತರ ಮಾತು. ಅಂತೆಯೇ ಮಂಗಳವಾರ (ಮಾ.೧೨) ವನಭೋಜನ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಬಿ. ಸದಾಶಿವ, ಅಧ್ಯಕ್ಷ ಜಯಕುಮಾರ್ ಚೆದ್ಕಾರ್ , ಕಾರ್ಯದರ್ಶಿ ಕೇಶವ ಚೌಟಾಜೆ, ದೇವಸ್ಥಾನದ ಸಮಿತಿ ಸದಸ್ಯರು, ಗ್ರಾಮಸ್ಥರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.