ನ್ಯೂಸ್ ನಾಟೌಟ್ : ಕೊಡಗು – ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳು ಹೆಚ್ಚು ಎಂದು ಹೇಳಲಾಗುತ್ತಿದೆ.ಬಿಜೆಪಿಯಿಂದ ಮೈಸೂರು ಮಹಾರಾಜ ಯದುವೀರ ಅವರನ್ನು ಕಣಕ್ಕಿಳಿಸಲು ತೆರೆ ಮರೆಯ ಹಿಂದೆ ತಯಾರಿಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.ಹೀಗಾಗಿ ಅಚ್ಚರಿಯೆನ್ನುವ ಹಾಗೆ ಪ್ರತಾಪ್ ಸಿಂಹ ಅವರು ದಿಢೀರ್ ಆಗಿ ಫೇಸ್ ಬುಕ್ ಲೈವ್ಗೆ ಬಂದಿದ್ದರು. ಹಾಗಾದರೆ ಅವರು ಮಾತಾಡಿದ್ದೇನು?
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮಗೆ ಟಿಕೆಟ್ ಕೈ ತಪ್ಪಬಹುದಾದ ಸಂದರ್ಭದಲ್ಲಿ ತಮ್ಮ ಬೆಂಬಲಕ್ಕೆ ನಿಂತುಕೊಂಡಿರುವ ತಮ್ಮ ಅಭಿಮಾನಿಗಳಿಗೆ, ಮೈಸೂರಿನ ನಾಗರಿಕರಿಗೆ, ಸಂಘ – ಸಂಸ್ಥೆಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮನ್ನು ಟೀಕೆಗಳ ಮೂಲಕ ತಿದ್ದಿ ತೀಡಿದವರಿಗೂ ಧನ್ಯವಾದ ಹೇಳಿದ್ದಾರೆ.
ಫೇಸ್ ಬುಕ್ ಲೈವ್ನಲ್ಲಿ ಮಾತನಾಡುವಾಗ,’ಅಲ್ಲಿ ದೂರದಲ್ಲಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸಭೆ ನಡೆಯುತ್ತಿತ್ತು. ರಾಜ್ಯದ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕಸರತ್ತಿನಲ್ಲಿ ರಾಜ್ಯದ ಬಿಜೆಪಿ ಮುಖಂಡರು, ಹೈಕಮಾಂಡ್ ನಾಯಕರು ಮುಳುಗಿದ್ದರು. ಅದೇ ಸಂದರ್ಭದಲ್ಲೇ ಇಲ್ಲಿ ಪ್ರತಾಪ್ ಸಿಂಹ ಹೀಗೆ ಫೇಸ್ ಬುಕ್ ಗೆ ಲೈವ್ಗೆ ಬಂದಿದ್ದು, ಜನರಲ್ಲಿ ‘ಏನೋ ವಿಷಯ ಇದೆ… ಅದಕ್ಕೆ ಸಿಂಹ ಅವರು ಫೇಸ್ ಬುಕ್ ಗೆ ಬಂದಿದ್ದಾರೆ’ ಎಂದೆನಿಸಿದ್ದು ಸುಳ್ಳಲ್ಲ. ಹಾಗಾದರೆ, ಅವರು ಏನು ಹೇಳಿದರು… ಅವರ ಮಾತುಗಳಲ್ಲೇ ಕೇಳಿ…..
* ಪ್ರಾಯಶಃ ಇನ್ನು ಮೂರ್ನಾಲ್ಕು ದಿನದಲ್ಲಿ ಚುನಾವಣೆಯ ಅಧಿಸೂಚನೆ ಹೊರಬೀಳಬಹುದು.ಆ ನಿಟ್ಟಿನಲ್ಲಿ ಸಂಸದನಾಗಿ ನಾನು ಇನ್ನೂ ಮೂರ್ನಾಲ್ಕು ದಿನ ಮಾತ್ರ ಕೆಲಸ ಮಾಡಬಲ್ಲೆ.ಕಳೆದ 10 ವರ್ಷಗಳಲ್ಲಿ ನನ್ನನ್ನು ಹರಸಿದ, ಬೆಳೆಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ನನ್ನನ್ನು ಟೀಕೆಗಳ ಮೂಲಕ ತಿದ್ದಿದವರಿಗೂ ನಾನು ಆಭಾರಿಯಾಗಿದ್ದೇನೆ ಎಂದಿದ್ದಾರೆ.
*ನನಗೆ ಟಿಕೆಟ್ ಸಿಗೋದು ಅನುಮಾನ ಎಂದಾಗ ನನ್ನ ಪರವಾಗಿ ಹಲವಾರು ಸಂಘ ಸಂಸ್ಥೆಗಳು ನಿಂತವು. ಜನರು ನಿಂತರು. ಅಚ್ಚರಿಯೆಂದರೆ, ನನ್ನನ್ನು ಟೀಕಿಸುತ್ತಿದ್ದ ಎಡಪಕ್ಷದವರೂ… ಛೇ… ಇವನು ಕೆಲಸ ಮಾಡಿದ್ದಾನೆ. ಇವನಿಗೆ ಟಿಕೆಟ್ ಸಿಗಬೇಕು ಎಂಬಂಥ ಮಾತುಗಳನ್ನಾಗಿದ್ದು ನನಗೆ ಅತ್ಯಂತ ಖುಷಿ ತಂದಿದೆ. ಕಳೆದ ನಾಲ್ಕು ದಿನಗಳಲ್ಲಿ ನೀವು ತೋರಿದ ಪ್ರೀತಿ, ನನ್ನ ಬಗ್ಗೆ ಇಟ್ಟಿರುವ ನಂಬಿಕೆ ನನ್ನಲ್ಲಿ ಮತ್ತಷ್ಟು ಕಿಚ್ಚು ಹೊತ್ತಿಸಿದೆ. ಜನಪರ ಕೆಲಸಗಳೆಂದರೆ ಅದು ಥ್ಯಾಂಕ್ ಲೆಸ್ ಜಾಬ್ ಎಂದುಕೊಂಡಿದ್ದವ ನಾನು. ಆದರೆ, ನಿಮ್ಮ ಪ್ರೀತಿ ನನ್ನ ಅಭಿಪ್ರಾಯವನ್ನು ಬದಲಾಯಿಸಿದೆ”
* ಸಂಸದನಾಗಿ 10 ವರ್ಷಗಳ ಅವಧಿಯಲ್ಲಿ ನಾನು ನನ್ನ ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡಿ, ಹಠ ತೊಟ್ಟು ಕಾರ್ಯಸಾಧನೆಗಳನ್ನು ಮಾಡಿದ್ದೇನೆ. ಅದರ ಬಗ್ಗೆ ನನಗೆ ಸಂಪೂರ್ಣ ಸಂತೃಪ್ತಿಯಿದೆ. ಅದೇ ಕಾರಣಕ್ಕಾಗಿ ನಾನು ಚುನಾವಣೆಯಲ್ಲಿ ಸುಮಾರು ಒಂದೂವರೆ ಲಕ್ಷ ಲೀಡ್ ಪಡೆದು ಗೆಲ್ಲುವಷ್ಟು ಬೆಳೆದಿದ್ದೇನೆ. ಜನರು ನನ್ನ ಮೇಲೆ ಅಷ್ಟು ವಿಶ್ವಾಸವಿಟ್ಟಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಕ್ಕರೆ, ಈಗ ಎಷ್ಟು ಮಾಡಿದ್ದೇನೋ ಅದಕ್ಕಿಂತ ಹೆಚ್ಚು ಕೆಲಸ ಮಾಡುತ್ತೇನೆ”
*ಕೊಡಗಿನ ಕಾವೇರಿ ತಾಯಿ, ಬೆಟ್ಟದ ಮೇಲೆ ಕುಳಿತಿರುವ ಚಾಮುಂಡಿ ತಾಯಿ ಆಶೀರ್ವಾದವಿದ್ದರೆ ನನಗೆ ಟಿಕೆಟ್ ಸಿಗುತ್ತದೆ. ಒಂದು ವೇಳೆ ಟಿಕೆಟ್ ಸಿಗದಿದ್ದರೂ ತೊಂದರೆಯಿಲ್ಲ. ನಿಮ್ಮ (ಜನರ) ನಡುವೆ ನಿಲ್ಲುತ್ತೇನೆ. ಮೋದಿಯವರು ಈ ದೇಶದ ಪ್ರಧಾನಿಯಾಗಬೇಕು, ದೇಶಕ್ಕೆ ಒಳ್ಳೆಯದಾಗಬೇಕು, ನಮ್ಮ ಕ್ಷೇತ್ರಕ್ಕೆ ಒಳ್ಳೆಯದಾಗಬೇಕು. ಅದಕ್ಕಾಗಿ ಶ್ರಮಿಸುತ್ತೇನೆ. ಮೋದಿಯವರ ಅಭಿಮಾನಿಗಳ ಪಡೆಯನ್ನು ಕಟ್ಟುತ್ತೇನೆ ಎಂದಿದ್ದಾರೆ.