ನ್ಯೂಸ್ ನಾಟೌಟ್:ಇತ್ತೀಚಿನ ದಿನಗಳಲ್ಲಿ ಹುಡುಗಿಯರ ಸಂಖ್ಯೆಯೇ ಕಡಿಮೆ ಎಂದು ಹೇಳಲಾಗುತ್ತಿದೆ.ಹೀಗಾಗಿ ಹೆಚ್ಚಿನ ಯುವಕರಿಗೆ ಹುಡುಗಿಯೇ ಸಿಗುತ್ತಿಲ್ಲ.ಇತ್ತ ಹುಡುಗಿಯರು ಕೂಡ ಒಳ್ಳೆಯ ಹುಡುಗ ಸಿಗಲೆಂದು ಬಯಸೋದು ಸಹಜ.ಹೀಗೆ ಇದಕ್ಕಾಗಿ ದೇವರ ಬಳಿ ವಿಶೇಷ ಪ್ರಾರ್ಥನೆ ಮಾಡುತ್ತಾರೆ.
ಇಲ್ಲೊಂದು ಕಡೆ ರಥೋತ್ಸವದಲ್ಲಿ ಭಕ್ತರು ಬಾಳೆ ಹಣ್ಣು ಜವನವನ್ನು ರಥಾರೂಢನಾಗಿ ಬರುವ ಕೆಗ್ಗೆರೆ ಲಿಂಗೇಶ್ವರನಿಗೆ ಎಸೆದು ತಮ್ಮ ಇಷ್ಟಾರ್ಥ ಈಡೇರಿಸು ಎಂದು ಪ್ರಾರ್ಥಿಸುವುದು ವಾಡಿಕೆ.ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮದಲ್ಲಿ ಕಳೆದ 5 ವರ್ಷಗಳ ಹಿಂದೆ ಕೆಗ್ಗೆರೆ ಲಿಂಗೇಶ್ವರ ಸ್ವಾಮಿಯನ್ನು ಪ್ರತಿಷ್ಠಾಪಿಸಿದ ಪ್ರತಿ ಶಿವರಾತ್ರಿಯಂದು ಕೆಗ್ಗೆರೆಲಿಂಗೇಶ್ವರನ ರಥೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹೀಗೆ ಬಾಳೆ ಹಣ್ಣು ಎಸೆಯುವರು ತಮ್ಮ ಕೋರಿಕೆಯನ್ನು ಬರೆದು ರಥಕ್ಕೆ ಎಸೆಯುತ್ತಾರೆ. ಭಕ್ತರು ತಮ್ಮ ಬೇಡಿಕೆ ಯನ್ನು ಬರೆದು ಎಸೆದಿರುವ ಬಾಳೆಹಣ್ಣುಗಳ ಮೇಲೆ ಭಕ್ತರು ಬರೆದಿರುವ ವಿಶಿಷ್ಟ ಕೋರಿಕೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಾಳೆಹಣ್ಣಿಗೆ ಜವನ ಸಿಗಿಸಿ ಬಾಳೆಹಣ್ಣಿನ ಮೇಲೆ ತಮ್ಮ ಕೋರಿಕೆಯನ್ನು ಬರೆದು ಎಸೆದಿರುವ ಭಕ್ತರು ಬೇಡಿಕೆಗಳನ್ನು ಕೆಗ್ಗೆರೆ ಲಿಂಗೇಶ್ವರ ನೋಡಿದ್ದಾನೋ ಇಲ್ಲವೋ, ಇವರು ಬರೆದಿರುವ ಬಾಳೆಹಣ್ಣುಗಳನ್ನು ಸ್ಥಳೀಯರು ನೋಡಿ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಈ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿವೆ.
ದೇವರೆ ನನಗೆ ಒಳ್ಳೆಯ ಹುಡುಗ ಸಿಗುವಂತೆ ಮಾಡು, ನಮ್ಮ ಮಗನಿಗೆ ಬೇಗ ಹುಡುಗಿ ಸಿಗಲಿ, ನಮ್ಮ ಕುಟುಂಬಕ್ಕೆ ಹೊಂದಿಕೊಂಡು ಹೋಗುವ ಸೊಸೆ ಬರಲಿ.. ಇವು ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮದಲ್ಲಿ ಶಿವರಾತ್ರಿಯ ದಿನ ನಡೆದ ರಥೋತ್ಸವದಲ್ಲಿ ದೇವರಿಗೆ ಭಕ್ತರು ಸಲ್ಲಿಸಿದ ಹರಕೆಯ ಸ್ಯಾಂಪಲ್ಗಳು.