ಕೊಚ್ಚಿ: ಕೊಚ್ಚಿ ಮೂಲದ ಟೂರ್ ಆಪರೇಟರ್ ಒಬ್ಬರು ತಮ್ಮ ಬಳಿ ಇರುವ 20 ಬಸ್ ಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಅದರಲ್ಲಿ ಅಚ್ಚರಿಯಿಲ್ಲ, ಆದರೆ ಆ ಮಾಲೀಕರು ತಮ್ಮ ಬಸ್ ಗಳನ್ನು ಕೆ.ಜಿ.ಗೆ 45 ರೂ. ಗಳಂತೆ ಮಾರಾಟ ಮಾಡುತ್ತಿದ್ದಾರೆ.
ರಾಯ್ಸನ್ ಜೋಸೆಫ್ ಎಂಬುವವರು ಟೂರಿಸ್ಟ್ ಬಸ್ ಬಿಜಿನೆಸ್ ನಡೆಸುತ್ತಿದ್ದರು. ಕಳೆದ ಒಂದೂವರೆ ವರ್ಷಗಳಲ್ಲಿ ಪ್ರಯಾಣ ನಿರ್ಬಂಧ ಹೇರಲಾಗಿರುವುದರಿಂದ ತೀವ್ರ ಸಂಕಷ್ಟಕ್ಕೀಡಾಗಿದ್ದರು. ಪ್ರವಾಸಿಗರ ಆಗಮನವೂ ಕಡಿಮೆಯಾಗಿರುವುದರಿಂದ ತೀವ್ರ ನಷ್ಟಕ್ಕೊಳಗಾಗಿ ಬ್ಯಾಂಕ್ ಸಾಲ ಮರಳಿಸಲು ಈಗ ಬಸ್ ಗಳನ್ನು ಗುಜರಿಗೆ ಮಾರಾಟ ಮಾಡುತ್ತಿದ್ದಾರೆ. ಅವರು ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರುವಂತೆ ಕೆ.ಜಿ.ಗೆ 45 ರೂ. ಬೆಲೆ ನಿಗದಿ ಪಡಿಸಿದ ನಂತರ ಇದುವರೆಗೂ 10 ಬಸ್ ಗಳು ಮಾರಾಟವಾಗಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳ ಟೂರಿಸ್ಟ್ ವಾಹನ ಮಾಲಕರ ಸಂಘ, ರಾಜ್ಯಾದ್ಯಂತ ಸುಮಾರು 2,000 ಟೂರಿಸ್ಟ್ ವಾಹನಗಳು ಗುಜರಿ ಸೇರಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ 1,000 ಬಸ್ಸುಗಳನ್ನು ಬ್ಯಾಂಕುಗಳು ಮತ್ತು ಸಾಲ ನೀಡಿದವರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.