ನ್ಯೂಸ್ ನಾಟೌಟ್ : ಆನ್ಲೈನ್ ಫುಡ್ ಡೆಲಿವರಿ ತಾಣ ಝೊಮಾಟೋ (Zomato) ಹಲವು ಬಾರಿ ಡೆಲಿವರಿ ವಿಷಯಕ್ಕೆ ಮತ್ತು ಅದರ ನೌಕರರ ವಿಷಯದಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಭಾರತದಲ್ಲಿ ಅತ್ಯಂತ ಜನಪ್ರಿಯ ಆನ್ಲೈನ್ ಫುಡ್ ಡೆಲಿವರಿ ಆ್ಯಪ್ಗಳ ಪೈಕಿ ಇದೂ ಒಂದು. ಈ ಕಂಪೆನಿಯಲ್ಲಿ ಪುರುಷರ ಜತೆಗೆ ಮಹಿಳೆಯರೂ ಫುಡ್ ಡೆಲಿವರಿ ಮಾಡಿ ಯಾವ ಉದ್ಯೋಗ ಮಾಡುತ್ತಿದ್ದಾರೆ.
ಇದೀಗ ಕಂಪೆನಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಮಹಿಳಾ ಉದ್ಯೋಗಿಗಳಿಗೆ ಟೀ ಶರ್ಟ್ ಬದಲು ಕುರ್ತಾ ವಿತರಿಸಿದೆ. ಸದ್ಯ ಝೊಮಾಟೋದ ಕುರ್ತಾ ಸಮವಸ್ತ್ರದ ವಿಡಿಯೊ ವೈರಲ್ ಆಗಿದೆ. ಝೊಮಾಟೋದ ಮಹಿಳಾ ಉದ್ಯೋಗಿಗಳು ಸಮವಸ್ತ್ರದ ಭಾಗವಾಗಿ ಟೀ ಶರ್ಟ್ ಬದಲು ಕುರ್ತಾಗಳನ್ನು ಧರಿಸುವ ಆಯ್ಕೆಯನ್ನು ಹೊಂದಿರುತ್ತಾರೆ ಎಂದು ಕಂಪೆನಿ ಘೋಷಿಸಿದೆ. ಪಾಶ್ಚಿಮಾತ್ಯ ಶೈಲಿಯ ಟೀ ಶರ್ಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹಲವು ಮಹಿಳಾ ಉದ್ಯೋಗಿಗಳ ಪರ್ಯಾಯ ಮಾರ್ಗ ಹುಡುಕುವಂತೆ ಮನವಿ ಮಾಡಿದ್ದರು. ಅದರ ಭಾಗವಾಗಿ ಕುರ್ತಾ ಪರಿಚಯಿಸಲಾಗುತ್ತಿದೆ ಎಂದು ಕಂಪೆನಿ ತಿಳಿಸಿದೆ. ಮಾತ್ರವಲ್ಲ ಹೊಸ ಸಮವಸ್ತ್ರದ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಝೊಮಾಟೋ ಉದ್ಯೋಗಿಗಳು ಹೊಸ ಸಮವಸ್ತ್ರ ಧರಿಸಿ ಖುಷಿಯಿಂದ ಫೋಸ್ ನೀಡುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ವಿಶೇಷ ಎಂದರೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಈ ಹೊಸ ಕುರ್ತಾವನ್ನು ಪರಿಚಯಿಸಲಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ವಿಡಿಯೊ ಹಂಚಿಕೊಂಡಿರುವ ಝೊಮಾಟೋ, ʼʼಇವತ್ತಿನಿಂದ ಝೊಮಾಟೋ ಮಹಿಳಾ ಉದ್ಯೋಗಿಗಳು ಸಮವಸ್ತ್ರವಾಗಿ ಕುರ್ತಾ ಧರಿಸಲಿದ್ದಾರೆʼʼ ಎಂದು ಬರೆದುಕೊಂಡಿದೆ. ಜತೆಗೆ ಮಹಿಳೆಯರಿಗೆ ಟೀ ಶರ್ಟ್ ಅಥವಾ ಕುರ್ತಾ ಎರಡರ ಪೈಕಿ ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಜತೆಗೆ ಅನುಕೂಲಕ್ಕಾಗಿ ಕುರ್ತಾದಲ್ಲಿ ಜೇಬನ್ನೂ ಅವಳವಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.