ಬೆಂಗಳೂರು: ರಾಜ್ಯಪಾಲರಿಂದ ಸಿಎಂ ಯಡಿಯೂರಪ್ಪ ರಾಜೀನಾಮೆ ಅಂಗೀಕಾರಗೊಂಡಿದೆ. ಯಡಿಯೂರಪ್ಪ ಅಭಿಮಾನಿಗಳಿಗೆ ಇಂದು ನಿಜಕ್ಕೂ ಅತ್ಯಂತ ದುಃಖದ ದಿನವೇ ಎನ್ನಬಹುದು. 4 ಬಾರಿ ಕರ್ನಾಟಕದ ಸಿಎಂ ಆದರೂ ಒಮ್ಮೆ ಕೂಡ ಅವರು ಅಧಿಕಾರ ಅವಧಿ ಪೂರ್ಣಗೊಳಿಸಲಿಲ್ಲ. ಹೀಗಾಗಿ ಅವರ ಅಭಿಮಾನಿಗಳು ಅತ್ಯಂತ ಭಾವುಕರಾಗಿದ್ದಾರೆ.
ವಿಧಾನಸೌಧದಲ್ಲಿ ಬಿಜೆಪಿ ಸರ್ಕಾರದ ಸಾಧನಾ ಪರ್ವ ಸಮಾವೇಶದಲ್ಲಿ ಅತ್ಯಂತ ಭಾವುಕರಾಗಿ ಮಾತನಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ ನಂತರ ನೇರವಾಗಿ ರಾಜಭವನಕ್ಕೆ ಬಿ ಎಸ್ ಯಡಿಯೂರಪ್ಪ ಕಾರಿನಲ್ಲಿ ತೆರಳಿದರು. ರಾಜಭವನಕ್ಕೆ ಬಂದು ರಾಜೀನಾಮೆ ಪತ್ರವನ್ನು ರಾಜ್ಯಪಾಲ ಗೆಹ್ಲೋಟ್ ಅವರಿಗೆ ಸಲ್ಲಿಸಿದರು. ಮುಂದಿನ ಸಿಎಂ ನೇಮಕವಾಗುವವರೆಗೆ ಹಂಗಾಮಿ ಸಿಎಂ ಆಗಿ ಮುಂದುವರಿಯುವಂತೆ ಬಿ ಎಸ್ ಯಡಿಯೂರಪ್ಪನವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.