ನ್ಯೂಸ್ ನಾಟೌಟ್ : ಚಾರ್ಮಾಡಿ ಘಾಟಿಯಲ್ಲಿ ಮಂಗಳೂರಿನತ್ತ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ಬ್ರೇಕ್ ಫೇಲ್ ಆಗಿದ್ದು, ಚಾಲಕನ ಸಮಯಪ್ರಜ್ಞೆಯಿಂದಾಗಿ ಭಾರೀ ಅನಾಹುತ ತಪ್ಪಿದೆ.
ಶುಕ್ರವಾರ(ಮಾರ್ಚ್ 8) ಬೆಳಗ್ಗೆ ಕಡೂರಿನಿಂದ ಮಂಗಳೂರಿಗೆ ಬರುತ್ತಿದ್ದ ಈ ಕೆ.ಎಸ್.ಆರ್.ಟಿ.ಸಿ ಬಸ್ ಚಾರ್ಮಾಡಿ ಘಾಟಿಯ ತಿರುವಿನಲ್ಲಿ ಬ್ರೇಕ್ ಫೇಲ್ ಆಗಿದ್ದು, ಇದು ತಿಳಿದ ತಕ್ಷಣ ಇದನ್ನು ಅರಿತ ಚಾಲಕ ಸಮಯಪ್ರಜ್ಞೆ ಮೆರೆದಿದ್ದು, ರಸ್ತೆಬದಿಯ ಡಿವೈಡರ್ ಗೆ ಢಿಕ್ಕಿ ಹೊಡೆಸಿ ಬಸ್ಸನ್ನು ನಿಲ್ಲುವಂತೆ ಮಾಡಿದ್ದಾರೆ ಎನ್ನಲಾಗಿದೆ. ಯಾವ ಸಮಸ್ಯೆಯೂ ಆಗದಂತೆ ರಸ್ತೆ ಬದಿಯ ಡಿವೈಡರ್ ಗೆ ಢಿಕ್ಕಿ ಹೊಡೆದು ಬಸ್ ನಿಂತಿದೆ.
ಬಸ್ಸಿನಲ್ಲಿದ್ದ 70 ಮಂದಿ ಪ್ರಯಾಣಿಕರು ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ವರದಿ ತಿಳಿಸಿದೆ. ಅತ್ಯಂತ ಅಪಾಯಕಾರಿ ತಿರುವುಗಳಿಂದ ಕೂಡಿರುವ ಚಾರ್ಮಾಡಿ ಘಾಟಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಚಾಲಕ ತೋರಿದ ಸಮಯಪ್ರಜ್ಞೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.