ನ್ಯೂಸ್ ನಾಟೌಟ್:ದನವನ್ನು ಕಟ್ಟಿಹಾಕಲೆಂದು ಹೋಗಿದ್ದ ವ್ಯಕ್ತಿಯೊಬ್ಬರ ಮೈ ಮೇಲೆ ದನದ ಕುತ್ತಿಗೆಗೆ ಕಟ್ಟಿದ್ದ ಹಗ್ಗ ಸಮೇತ ದನವೂ ಬಿದ್ದ ಪರಿಣಾಮ ವ್ಯಕ್ತಿ ಗಂಭೀರ ಗಾಯಗೊಂಡಿದ್ದ ಘಟನೆ ಸಂಭವಿಸಿತ್ತು.ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ದನದ ಮಾಲೀಕರಾಗಿದ್ದ ಸುಳ್ಯದ ಅಮರಪಡ್ನೂರು ಗ್ರಾಮದ ಚೊಕ್ಕಾಡಿಯ ನಿವಾಸಿ ನಡುಗಲ್ಲು ರಾಧಾಕೃಷ್ಣ ಮೃತರು ಎಂದು ವರದಿಯಾಗಿದೆ.ಅವರು ಫೆ. 27ರಂದು ಎಂದಿನಂತೆ ತಮ್ಮ ದನವನ್ನು ಹುಲ್ಲು ಮೇಯೋದಕ್ಕಾಗಿ ಕಟ್ಟಿಹಾಕಲೆಂದು ತೋಟಕ್ಕೆ ತೆರಳಿದ್ದಾರೆ. ಈ ವೇಳೆ ತೋಟದ ಬದಿಯಲ್ಲಿ ಕರೆದೊಯ್ಯುತ್ತಿರುವಾಗ ಬರೆಯಲ್ಲಿ ಜಾರಿ ಬಿದಿದ್ದಾರೆ.ಆಗ ದನದ ಕುತ್ತಿಗೆಗೆ ಕಟ್ಟಿದ್ದ ಬಳ್ಳಿ ಅವರ ಕೈಯಲ್ಲಿದ್ದುದರಿಂದ ಎಳೆಯಲ್ಪಟ್ಟು ದನವು ಇವರ ಮೈಮೇಲೆ ಬಿದ್ದಿದೆ.
ಅಪಾಯಕಾರಿ ಬರೆಯಲ್ಲಿದ್ದ ಎರಡು ಮರಗಳ ಮಧ್ಯೆ ರಾಧಾಕೃಷ್ಣರು ಸಿಲುಕಿಕೊಂಡರು. ವಿಷಯ ತಿಳಿದು ಮನೆಯವರು , ಸ್ಥಳೀಯರು ಧಾವಿಸಿ ಅವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರು.ಕಳೆದ 10 ದಿನಗಳಿಂದ ಮಂಗಳೂರಿನ ಕೆಎಂಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಅವರು ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.