ನ್ಯೂಸ್ ನಾಟೌಟ್: ಶಿಕ್ಷಣ ಇಲಾಖೆಯು 6ರಿಂದ 10ನೇ ತರಗತಿವರೆಗೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದು, ಇಲ್ಲಿ ಸನಾತನ ಧರ್ಮಕ್ಕೆ ಸೂಕ್ತ ವಿವರಣೆಯನ್ನು ನೀಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
“ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು” ಎಂಬ ತಮಿಳುನಾಡು ಸಚಿವ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಹೇಳಿಕೆ ಈಗಾಗಲೇ ದೊಡ್ಡ ಮಟ್ಟದ ವಿವಾದವನ್ನು ಹುಟ್ಟುಹಾಕಿತ್ತು. ಈ ಹೇಳಿಕೆ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ತಪರಾಕಿಯನ್ನೂ ನೀಡಿತ್ತು.. ಸಚಿವರಾಗಿ ತಮ್ಮ ಹೇಳಿಕೆಗಳ ಬಗ್ಗೆ ಜಾಗರೂಕರಾಗಿರಬೇಕು ಹಾಗೂ ಹೇಳಿಕೆಗಳ ಪರಿಣಾಮಗಳ ಬಗ್ಗೆಯೂ ಅವರು ತಿಳಿದಿರಬೇಕು ಎಂದು ಹೇಳಿತ್ತು.
ಈ ಹೊತ್ತಿಗೆ ಈಗ ಕರ್ನಾಟಕದಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಸನಾತನ ಧರ್ಮದ ಬಗ್ಗೆ ಉಲ್ಲೇಖ ಮಾಡಲಾಗಿದ್ದು, ಅದರಲ್ಲಿ ಸೂಕ್ತ ವಿವರಣೆಯನ್ನು ನೀಡಿದ್ದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕ ಸರ್ಕಾರವು ಪಠ್ಯಪುಸ್ತಕ ಪರಿಷ್ಕರಣೆ ಮಾಡಿದೆ. ಇಲ್ಲಿ “ಸನಾತನ ಧರ್ಮ”ಕ್ಕೆ ಸಂಬಂಧಿಸಿದಂತೆ ಸೂಕ್ತ ವಿವರಣೆಯನ್ನು ನೀಡಲಾಗಿದೆ ಮತ್ತು 8ನೇ ತರಗತಿಯ ಇತಿಹಾಸ ಪಠ್ಯಪುಸ್ತಕದಲ್ಲಿ ಸನಾತನ ಧರ್ಮಕ್ಕೆ ನಿಖರವಾದ ವ್ಯಾಖ್ಯಾನವನ್ನು ನೀಡಲಾಗಿದೆ ಎಂಬ ಬಗ್ಗೆ ಸಿಎಂ ಸ್ಪಷ್ಟೀಕರಣ ನೀಡಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ರಚಿಸಿದ್ದ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಿಂದ ಕೈಬಿಡಲಾಗಿದ್ದ ಪ್ರಗತಿಪರ ಸಾಹಿತಿಗಳಾದ ಗಿರೀಶ್ ಕಾರ್ನಾಡ್, ಪೆರಿಯಾರ್ ಮತ್ತು ದೇವನೂರು ಮಹಾದೇವ್ ಅವರ ಕೃತಿಗಳನ್ನು ಸರ್ಕಾರ ವಾಪಸ್ ತಂದಿದೆ.
ಕಳೆದ ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಪಠ್ಯಪುಸ್ತಕಗಳಲ್ಲಿ ಪರಿಚಯಿಸಲಾದ ಎಲ್ಲ ತಿದ್ದುಪಡಿಗಳನ್ನು ಸಮಿತಿಯು ಉಳಿಸಿಕೊಂಡಿದೆ ಎಂದಿದ್ದಾರೆ. 2024-25ನೇ ಸಾಲಿನ ಆರರಿಂದ 10ನೇ ತರಗತಿವರೆಗಿನ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿದೆ. ಎಲ್ಲಾ ಪಠ್ಯಗಳನ್ನು ಎರಡು ಸಂಪುಟಗಳಾಗಿ (Two Parts book) ವಿಭಾಗಿಸಿರುವುದು ಈ ಬಾರಿಯ ಪರಿಷ್ಕರಣೆಯ ವಿಶೇಷವಾಗಿದೆ. ಡಾ ಮಂಜುನಾಥ್ ಹೆಗಡೆ ನೇತೃತ್ವದಲ್ಲಿ ರಚಿಸಲಾಗಿದ್ದ ಪಠ್ಯ ಪರಿಷ್ಕರಣೆ ಸಮಿತಿಯು ಪಠ್ಯಪುಸ್ತಕ ಪರಿಷ್ಕರಿಸಿ ವರದಿ ನೀಡಿದೆ. ಪಠ್ಯಪುಸ್ತಕದ ಪರಿಷ್ಕರಣೆ ಮಾಡಿರುವ ತಜ್ಞರು ತಾವು ಯಾವ ಅಂಶಗಳನ್ನು ಆಧರಿಸಿ, ಆದ್ಯತೆಯನ್ನು ನೀಡಿ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಿರುವುದಾಗಿಯೂ ವರದಿಯಲ್ಲಿ ತಿಳಿಸಿದ್ದಾರೆ. *ಸನಾತನ ಧರ್ಮ/ಎಂಬ ಅಧ್ಯಾಯದಲ್ಲಿ ಕೆಲವು ಅಂಶಗಳನ್ನು ಸೇರಿಸಿ, ವ್ಯವಸ್ಥಿತವಾದ ನಿರೂಪಣೆಯನ್ನು ನೀಡಲಾಗಿದೆ ಎಂದು ಹೇಳಲಾಗಿದೆ, ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕನೆಂದು ನಿರೂಪಿಸಲಾಗಿದೆ ಎಂದು ವರದಿ ತಿಳಿಸಿದೆ.