ನ್ಯೂಸ್ ನಾಟೌಟ್: ತಮ್ಮ ಪಕ್ಷದ ಶಾಸಕ ಸುದೇಶ್ ರಾಯ್ ಎಂಬವರು ಮಧ್ಯ ಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ಮದ್ಯದಂಗಡಿಯನ್ನು ಅಕ್ರಮವಾಗಿ ನಡೆಸುತ್ತಿದ್ದಾರೆ ಎಂದು ಬಿಜೆಪಿಯ ಭೋಪಾಲ್ ಸಂಸದೆ ಪ್ರಜ್ಞಾ ಸಿಂಗ್ ಠಾಕುರ್ ಆರೋಪಿಸಿದ್ದಾರೆ ಹಾಗೂ ಸುದೇಶ್ ರಾಯ್ ನನ್ನು ಶಾಸಕ ಸ್ಥಾನದಿಂದ ಕೈಬಿಡಬೇಕೆಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ.
ಈ ಆರೋಪ ಕುರಿತಂತೆ ಮಾಧ್ಯಮ ಮಂದಿ ಸುದೇಶ್ ನನ್ನು ಪ್ರಶ್ನಿಸಿದಾಗ ಪ್ರಜ್ಞಾ ಆರೋಪಗಳ ಕುರಿತು ಪರಿಶೀಲಿಸುವಂತೆ ಮಾಧ್ಯಮ ಮಂದಿಯ ಬಳಿಯೇ ಕೇಳಿಕೊಂಡರು ಎನ್ನಲಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ವಂಚಿತರಾಗಿರುವ ಪ್ರಜ್ಞಾ ಸಿಂಗ್, ಸೋಮವಾರ(ಫೆ.೪) ರಾತ್ರಿ ತಾವು ತಮ್ಮ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಲು ತೆರಳಿದ್ದ ವೇಳೆ ಖಜೂರಿಯಾ ಕಾಲ ಎಂಬಲ್ಲಿನ ಕೆಲ ಹುಡುಗಿಯರು ತಮ್ಮ ಬಳಿ ಬಂದು ತಮ್ಮ ಶಾಲೆಯ ಎದುರು ಇರುವ ಮದ್ಯದಂಗಡಿಯ ಬಗ್ಗೆ ದೂರಿದ್ದರು ಎಂದು ಹೇಳಿದ್ದಾರೆ.
“ಹುಡುಗಿಯರು ಬೇಸರಗೊಂಡಿದ್ದರು, ಕಣ್ಣಿರು ಸುರಿಸುತ್ತಿದ್ದರು, ಮದ್ಯದಂಗಡಿಯಲ್ಲಿ ಸೇರಿರುವ ಜನರು ತಮ್ಮ ಬಗ್ಗೆ ಏನೇನೋ ಮಾತಾಡುತ್ತಾರೆ ಎಂದರು,” ಎಂದು ಪ್ರಜ್ಞಾ ಠಾಕುರ್ ಹೇಳಿದರು. “ನಾವು ಸುರಕ್ಷಿತರಲ್ಲ, ನಮಗೆ ಏನು ಬೇಕಾದರೂ ಆಗಬಹುದೆಂದು ಅವರು ಹೇಳಿದರು. ಮದ್ಯ ಸೇವಿಸಿದ ಕೆಲವರು ತಮ್ಮ ಮನೆಗಳನ್ನೂ ಪ್ರವೇಶಿಸುತ್ತಾರೆ ಎಂದು ಕೆಲ ಮಹಿಳೆಯರು ದೂರಿದ್ದಾರೆ,” ಎಂದು ಪ್ರಜ್ಞಾ ಸಿಂಗ್ ಹೇಳಿದ್ದಾರೆ.
“ಖಜೂರಿಯಾ ಕಾಲಾ ಬಾಂಗ್ಲಾದಲ್ಲಿನ ಅಕ್ರಮ ಮದ್ಯದಂಗಡಿಯನ್ನು ಬಿಜೆಪಿ ಶಾಸಕ ಸುದೇಶ್ ರಾಯ್ ನಡೆಸುತ್ತಿದ್ದಾರೆಂದು ಜನರು ಮತ್ತು ಅಧಿಕಾರಿಗಳು ನನಗೆ ತಿಳಿಸಿದರು. ನನಗೆ ನಾಚಿಕೆಯಾಗುತ್ತಿದೆ. ಇಂತಹ ಕೆಟ್ಟ ಕೆಲಸದಲ್ಲಿ ತೊಡಗಿರುವ ಅವರಂತಹ ವ್ಯಕ್ತಿಯನ್ನು ಹುದ್ದೆಯಿಂದ ಕೈಬಿಡಬೇಕೆಂದು ಪಕ್ಷವನ್ನು ಆಗ್ರಹಿಸುತ್ತೇನೆ,” ಎಂದು ಠಾಕುರ್ ಹೇಳಿದ್ದಾರೆ. ಇದಕ್ಕೆ ಹಲವರ ಮೆಚ್ಚುಗೆ ವ್ಯಕ್ತವಾಗಿದೆ.