ನ್ಯೂಸ್ ನಾಟೌಟ್: ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತೆ ವಿಶ್ವದ ಶ್ರೀಮಂತ ವ್ಯಕ್ತಿಯಾಗಿದ್ದು, ಇಲ್ಲಿ ತನಕ ಜಗತ್ತಿನ ನಂ.೧ ಶ್ರೀಮಂತರಾಗಿದ್ದ ಎಲನ್ ಮಾಸ್ಕ್ ಆ ಪಟ್ಟವನ್ನು ಕಳೆದುಕೊಂಡಿದ್ದಾರೆ.
ಬ್ಲೂಮ್ಬರ್ಗ್ ಬಿಲಿಯನೇರ್ಗಳ ಪಟ್ಟಿಯ ಪ್ರಕಾರ ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ರಿಂದ ಈ ಪಟ್ಟವನ್ನು ಕಸಿದುಕೊಂಡಿದ್ದಾರೆ. ಟೆಸ್ಲಾ ಷೇರುಗಳು ತೀವ್ರ ಕುಸಿತ ಕಂಡಿದ್ದು, ಎಲಾನ್ ಮಸ್ಕ್ ಅವರ ನಿವ್ವಳ ಆಸ್ತಿ ಮೌಲ್ಯ ಕಡಿಮೆಯಾಗಿದೆ. ಇದರಿಂದ ಬಿಜೋಸ್ ಮೊದಲ ಸ್ಥಾನಕ್ಕೇರಿದ್ದಾರೆ. ಬ್ಲೂಮ್ಬರ್ಗ್ ಬಿಲಿಯನೇರ್ಗಳ ಪಟ್ಟಿಯ ಪ್ರಕಾರ ಜೆಫ್ ಬೆಜೋಸ್ ನಿವ್ವಳ ಆಸ್ತಿಯ ಮೌಲ್ಯ 200 ಬಿಲಿಯನ್ ಡಾಲರ್ (ಸುಮಾರು 16.58 ಲಕ್ಷ ಕೋಟಿ ರೂ.) ಇದೆ.
ಇದೇ ವೇಳೆ ಎರಡನೇ ಸ್ಥಾನದಲ್ಲಿರುವ ಎಲಾನ್ ಮಸ್ಕ್ ಅವರು 198 ಬಿಲಿಯನ್ ಡಾಲರ್ (ಸುಮಾರು 16.41 ಲಕ್ಷ ಕೋಟಿ ರೂ.) ಮೌಲ್ಯದ ಆಸ್ತಿ ಹೊಂದಿದ್ದಾರೆ. ಎಲ್ವಿಎಂಎಚ್ನ ಸಿಇಒ ಬರ್ನಾರ್ಡ್ ಅರ್ನಾಲ್ಟ್ 197 ಬಿಲಿಯನ್ ಡಾಲರ್ (16.33 ಲಕ್ಷ ಕೋಟಿ ರೂ.) ಆಸ್ತಿಯೊಂದಿಗೆ ಸಿರಿವಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಯಾವುದೇ ಬಿಲಿಯನೇರ್ ಮೊದಲ ಹತ್ತು ಸ್ಥಾನಗಳಲ್ಲಿ ಇಲ್ಲ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ 115 ಬಿಲಿಯನ್ ಡಾಲರ್ (ಸುಮಾರು 9.53 ಲಕ್ಷ ಕೋಟಿ ರೂ.) ನಿವ್ವಳ ಆಸ್ತಿಯೊಂದಿಗೆ ಪಟ್ಟಿಯಲ್ಲಿ 11 ನೇ ಸ್ಥಾನದಲ್ಲಿದ್ದಾರೆ. ಗೌತಮ್ ಅದಾನಿ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದು, ಅವರು 104 ಬಿಲಿಯನ್ ಡಾಲರ್ (8.62 ಲಕ್ಷ ಕೋಟಿ ರೂ.) ಆಸ್ತಿ ಹೊಂದಿದ್ದಾರೆ.