ನ್ಯೂಸ್ ನಾಟೌಟ್: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಕೂಲಿ ಕಾರ್ಮಿಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.
ಬಂಧಿತನನ್ನು ಮೊಹಮ್ಮದ್ ರಸೂಲ್ ಕಡ್ದಾರೆ (45) ಎಂದು ಗುರುತಿಸಲಾಗಿದೆ. ಈತ ಹೈದರಾಬಾದ್ನಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಎನ್ನಲಾಗಿದೆ. ರಸೂಲ್ ಕಡ್ದಾರೆ ಸುರಪುರ ತಾಲೂಕು ರಂಗಂಪೇಟೆಯ ನಿವಾಸಿ ಎನ್ನಲಾಗಿದ್ದು, ಈ ಪ್ರಕರಣ ತನಿಖೆಯ ಹಂತದಲ್ಲಿದೆ. ಮೊಹಮ್ಮದ್ ರಸೂಲ್ ಕಡ್ದಾರೆ ವಿರುದ್ಧ ಐಪಿಸಿ ಸೆಕ್ಷನ್ 505 (1) (ಬಿ), 25 (1) (ಬಿ) ಮತ್ತು ಶಸ್ತ್ರಾಸ್ತ್ರ ಕಾಯ್ದೆ ಪ್ರಕಾರ ಕೇಸ್ ದಾಖಲಾಗಿದೆ.
ಶ್ರೀರಾಮ ಸೇನೆ ಜಿಲ್ಲಾ ಅಧ್ಯಕ್ಷ ಶರಣು ನಾಯಕ್ ಮೊಹಮ್ಮದ್ ರಸೂಲ್ ಕಡ್ದಾರೆ ವಿರುದ್ಧ ದೂರು ದಾಖಲಿಸಿದ್ದರು. ಮೊಹಮ್ಮದ್ ರಸೂಲ್ ಕಡ್ದಾರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ ವಿಡಿಯೋದಲ್ಲಿ, “ಮೋದಿ ನೀನು ಉತ್ತಮ ಆಡಳಿತ ನೀಡುತ್ತಿಲ್ಲ. ಚಹಾ ಮಾರಾಟ ಮಾಡುತ್ತಿದ್ದೆ. ಬಿಜೆಪಿ ಹೊರತಾಗಿ ನೀನು ಮುಖಾಮುಖಿಯಾಗುವುದಾದರೆ ನಾನು ನಿನ್ನನ್ನು ಎದುರಿಸುವುದಕ್ಕೆ ಸಿದ್ಧನಾಗಿದ್ದೇನೆ. ಒಂದೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಿನ್ನ ನರ ಕಟ್ ಆಗಲಿದೆ. ಕಾಂಗ್ರೆಸ್ ಜಿಂದಾಬಾದ್” ಎಂದು ಹೇಳಿಕೆ ನೀಡಿದ್ದಾನೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧವೂ ಇದೇ ರೀತಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.