ನ್ಯೂಸ್ ನಾಟೌಟ್: ಫೆಬ್ರವರಿ 27ರಂದು ಪಾಕ್ ಪರ ಘೋಷಣೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಠಾಣೆಯ ಪೊಲೀಸರು ಮೂವರನ್ನು ಬಂಧಿಸಲಾಗಿದೆ. ಮುನಾವರ್, ಇಲ್ತಾಜ್ ಮತ್ತು ಶಫಿ ನಾಶಿಪುಡಿ ಮೂವರ ಬಂಧನವಾಗಿದೆ ಎಂದು ವರದಿ ತಿಳಿಸಿದೆ. ಆರ್ಟಿ ನಗರದ ಮುನಾವರ್, ಇಲ್ತಾಜ್ ದೆಹಲಿ ಮೂಲದವನು ಎಂದು ತಿಳಿದು ಬಂದಿದೆ.
ಶಫಿ ನಾಶಿಪುಡಿ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿದವ ಎಂದು ಹೇಳಲಾಗಿದೆ. ರಾಜ್ಯಸಭಾ ಸಂಸದ ಸಯ್ಯದ್ ನಾಸೀರ್ ಹುಸೇನ್ ಗೆಲುವಿನ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ರಾಜ್ಯ ಸರ್ಕಾರ ಘಟನೆ ನಡೆದ ದೃಶ್ಯಗಳನ್ನು ಎಫ್ಎಸ್ಎಲ್ ಗೆ ರವಾನಿಸಿತ್ತು. ಎಫ್ಎಸ್ಎಲ್ ವರದಿ ದೃಢವಾದ ಹಿನ್ನೆಲೆ ಮೂವರ ಬಂಧನವಾಗಿದೆ ಎನ್ನಲಾಗಿದೆ.
ಸದ್ಯ ಮೂವರು ಆರೋಪಿಗಳನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಫೆಬ್ರವರಿ 27ರಂದು ರಾಜ್ಯಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಮೂವರು, ಬಿಜೆಪಿಯಿಂದ ಒಬ್ಬರು ಗೆಲುವು ದಾಖಲಿಸಿದ್ದರು. ಕಾಂಗ್ರೆಸ್ನ ಮೂವರ ಪೈಕಿ ಸಯ್ಯದ್ ನಾಸೀರ್ ಹುಸೇನ್ ಸಹ ಒಬ್ಬರು. ಫಲಿತಾಂಶದ ಬಳಿಕ ವಿಧಾನಸೌಧದಿಂದ ಹೊರ ಬರುವ ವೇಳೆ ನಾಸೀರ್ ಹುಸೇನ್ ಬೆಂಬಲಿಗರ ಗುಂಪಿನಿಂದ ಪಾಕ್ ಪರ ಘೋಷಣೆ ಕೇಳಿ ಬಂದಿರೋ ಆರೋಪ ಕೇಳಿ ಬಂದಿತ್ತು.