ನ್ಯೂಸ್ ನಾಟೌಟ್ : ಕೊಡಗು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಅಟ್ಟಹಾಸ ಜೋರಾಗಿದೆ.ಅದರಲ್ಲೂ ಕಾಡಾನೆ ದಾಳಿಯಿಂದಾಗಿ ಅಲ್ಲಿನ ಜನ ತತ್ತರಿಸಿ ಹೋಗಿದ್ದಾರೆ.ಕ್ಷಣ ಕ್ಷಣದಲ್ಲಿ ಭಯದ ವಾತಾವರಣ, ಕಾಡಿಗೆ ಹೋದವರು ವಾಪಾಸ್ ಬರುತ್ತಾರೆನ್ನುವ ಗ್ಯಾರಂಟಿಯೇ ಇಲ್ಲ.ಹೀಗೆ ಇಲ್ಲಿನ ಜನರ ಪಾಡು ಹೇಳತೀರದಾಗಿದೆ.
ಇದೀಗ ಕೊಡಗು ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿ ಆನೆ ದಾಳಿಗೆ (Elephant Attack) ಬಲಿಯಾಗಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಹಲವಾರು ಮಂದಿಯನ್ನು ಆನೆ ದಾಳಿಗೆ ಕಳೆದುಕೊಂಡಿರುವ ಕೊಡಗು ಜಿಲ್ಲೆಯಲ್ಲಿ (Kodagu News) ಇನ್ನೊಂದು ಜೀವ ಬಲಿಯಾಗಿದೆ.
ಕೊಡಗು ಜಿಲ್ಲೆ ಮಡಿಕೇರಿ ಸಮೀಪ ನಿಶಾನಿ ಬೆಟ್ಟದಲ್ಲಿ (Nishani Betta in Kodagu) ದುರಂತ ನಡೆದಿದೆ. ಗಾಳಿಬೀಡು ಗ್ರಾಮದ ನಿಶಾನಿಬೆಟ್ಟದಲ್ಲಿ ಗಾಳಿಬೀಡು ಗ್ರಾಮದ ವರಡ ನಿವಾಸಿ ಅಪ್ಪಚ್ಚ(60) ಅವರ ಶವ (Man dies of Elephant Attack) ಪತ್ತೆಯಾಗಿದೆ. ಅವರು ಕಾಡಾನೆ ತುಳಿದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಅಪ್ಪಚ್ಚ ಅವರು ಶನಿವಾರ ಕೆಲಸಕ್ಕೆಂದು ಹೋಗಿದ್ದಾರೆ.ಆದರೆ ಅವರು ಮರಳಿ ಬಂದಿರಲಿಲ್ಲ. ಹೀಗಾಗಿ ರಾತ್ರಿ ಇಡೀ ಮನೆಯವರು ಹುಡುಕಾಟ ನಡೆಸಿದ್ದರೂ ಸಿಕ್ಕಿರಲಿಲ್ಲ. ಮುಂಜಾನೆ ನಿಶಾನಿ ಬೆಟ್ಟಕ್ಕೆ ಪ್ರವಾಸಿಗರು ಚಾರಣಕ್ಕೆ ತೆರಳುವ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಚಾರಣಿಗರು ಶವ ಗಮನಿಸಿ ಸ್ಥಳೀಯರಿಗೆ ಮಾಹಿತಿ ನೀಡಿದರು. ಕೂಡಲೇ ಬಂದು ನೋಡಿದಾಗ ಅದು ಅಪ್ಪಚ್ಚ ಅವರದಾಗಿತ್ತು. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳ ಮತ್ತು ಆಸುಪಾಸಿನಲ್ಲಿ ಆನೆ ನಡೆದಾಡಿದ ಹೆಜ್ಜೆ ಗುರುತುಗಳು ಕಂಡುಬಂದಿದ್ದರಿಂದ ಇದು ಆನೆ ದಾಳಿಯಿಂದ ನಡೆದ ಸಾವು ಎಂದು ಸಂಶಯ ವ್ಯಕ್ತವಾಗಿದೆ.ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ನಡೆದ ಘಟನೆ ನಡೆದಿದೆ.