ಬೆಂಗಳೂರು : ರಾಜ್ಯದಲ್ಲಿ ಹಿಜಾಬ್ – ಕೇಸರಿ ಶಾಲು ವಿವಾದ ಹೈಕೋರ್ಟ್ ಮೆಟ್ಟಿಲೇರಿದ್ದು, ಇಡೀ ರಾಜ್ಯದಲ್ಲಿ ಕೋರ್ಟಿನ ತೀರ್ಪಿನ ಮೇಲೆ ಕುತೂಹಲ ಮೂಡಿದೆ. ಇಂದು ಮದ್ಯಾಹ್ನ ವಾದ – ವಿವಾದವನ್ನು ಆಲಿಸಿದ ಹೈಕೋರ್ಟ್ ನಾಳೆಗೆ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.
ಹಿಜಾಬ್ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಲ್ಲ. ಸಮವಸ್ತ್ರ ಧರಿಸುವ ಬಗ್ಗೆ ಕಾಲೇಜುಗಳಿಗೆ ಸ್ವಾಯತ್ತತೆ, ಸ್ವಾತಂತ್ಯ ಇದೆ ಎಂದು ಅಡ್ವಾಕೇಟ್ ಜನರಲ್ ಪ್ರಭುಲಿಂಗ ಕೆ ನಾವದಗಿಯವರು ವಾದವನ್ನು ಮಂಡಿಸಿದ್ದು ಅರ್ಜಿದಾರರ ಪರ ಅಭಿಷೇಕ್ ಜನಾರ್ದನನ್ ವಾದ ಮಂಡಿಸಿದ್ದಾರೆ. ಇನ್ನು ವಾದ ಪ್ರತಿವಾದವನ್ನು ಆಲಿಸಿದ ಹೈಕೋರ್ಟ್ ನಾಳೆಗೆ ವಿಚಾರಣೆಯನ್ನು ಮುಂದೂಡಿದೆ.
ನಾಳೆಯಿಂದ ರಾಜ್ಯದ ಎಲ್ಲಾ ಪದವಿ ಕಾಲೇಜುಗಳಿಗೆ ಹಾಗೂ ಪ್ರೌಢ ಶಾಲೆಗಳಿಗೆ ಮೂರು ದಿನ ರಜೆಯನ್ನು ಘೋಷಣೆ ಮಾಡಿದೆ. ಈ ಮೂಲಕ ಪರಿಸ್ಥಿತಿ ನಿಯಂತ್ರಿಸೋದಕ್ಕೆ ಮುನ್ಸೂಚನೆ ಕ್ರಮ ಕೈಗೊಂಡಿದೆ. ಈ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಾನು ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಲಾ ಕಾಲೇಜುಗಳ ನಿರ್ವಹಣೆ ಮತ್ತು ಕರ್ನಾಟಕದ ಜನರಿಗೆ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಮನವಿ ಮಾಡುತ್ತೇನೆ. ಮುಂದಿನ ಮೂರು ದಿನಗಳ ಕಾಲ ಎಲ್ಲಾ ಪ್ರೌಢ ಶಾಲಾ ಕಾಲೇಜುಗಳನ್ನು ಮುಚ್ಚಲು ನಾನು ಆದೇಶಿಸಿದ್ದೇನೆ. ಸಂಬಂಧಪಟ್ಟ ಎಲ್ಲರೂ ಸಹಕರಿಸುವಂತೆ ಕೋರಲಾಗಿದೆ.