ನ್ಯೂಸ್ ನಾಟೌಟ್: ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆ ಕೂಗಿರುವ ದೇಶದ್ರೋಹಿಗಳ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸಿಡಿದೆದ್ದಿದೆ.
ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಯ್ಯದ್ ನಾಸೀರ್ ಹುಸೇನ್ ಅವರ ಗೆಲುವಿನ ಸಂದರ್ಭದಲ್ಲಿ ಅವರ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದು ಖಂಡನೀಯ, ಕೂಡಲೇ ಸರ್ಕಾರ ತಪ್ಪಿಸ್ಥರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ. ಮಾತ್ರವಲ್ಲ ಮುಂದಿನ ದಿನಗಳಲ್ಲಿ ಈ ಬಗ್ಗೆ ರಾಜ್ಯಾದ್ಯಂತ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದೆ.
ಕೆಲವು ದಿನಗಳ ಹಿಂದೆ ವಿಧಾನಸಭೆ ಚುನಾವಣೆ ಗೆಲುವಿನ ಸಂದರ್ಭದಲ್ಲೂ ಬೆಳಗಾವಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿ ಪಾಕಿಸ್ತಾನದ ಧ್ವಜ ಹಾರಿಸಿದ್ದರು. ದೇಶದ್ರೋಹಿಗಳಿಗೆ ವಿಧಾನಸಭೆಯಲ್ಲಿ ಜಾಗ ಕೊಟ್ಟಿರುವುದು ಆತಂಕಕಾರಿ ಬೆಳವಣಿಗೆ. ಈ ವಿಷಯ ಅತ್ಯಂತ ಗಂಭೀರವಾಗಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಇರುವುದಕ್ಕೆ ಪದೇ ಪದೇ ಇಂತಹ ಘಟನೆಗಳು ನಡೆಯುತ್ತವೆ.
ಸರಕಾರ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಬಿವಿಪಿ ಒತ್ತಾಯಿಸಿದೆ. ಪಾಕಿಸ್ತಾನ ಪರ ಘೋಷಣೆ ಕೂಗಿದ ವ್ಯಕ್ತಿಯ ಮೇಲೆ ದೇಶದ್ರೋಹದ ಅಪರಾಧದ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಮತ್ತು ಈ ಪ್ರಕರಣದ ಸೂಕ್ತ ತನಿಖೆ ನಡೆದು ತೀರ್ಪು ಪ್ರಕಟವಾಗುವ ತನಕ ರಾಜ್ಯ ಸಭೆಯ ಸದಸ್ಯರಾಗಿ ಪ್ರಮಾಣ ವಚನವನ್ನು ನೀಡಬಾರದು ಎಂದು ಎ.ಬಿ.ವಿ.ಪಿ ಆಗ್ರಹಿಸಿದೆ. ಕರ್ನಾಟಕದ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಹರ್ಷಿತ್ ಕೊಯಿಲ, ಮಂಗಳೂರು ಜಿಲ್ಲಾ ಸಂಚಾಲಕ್ ಶ್ರೀಪಾದ್ ತಂತ್ರಿ ಪೊಳಲಿ, ಮಂಗಳೂರು ತಾಲೂಕ್ ಸಂಚಾಲಕ್ ಆದಿತ್ಯ ಪಿ ಶೆಟ್ಟಿ, ಮಂಗಳೂರು ಮಹಾನಗರ ಕಾರ್ಯದರ್ಶಿ ಶ್ರೇಯಸ್ ಇಡ್ಯಡ್ಕ,ಮಹಾನಗರ ಸಹ ಕಾರ್ಯದರ್ಶಿ ವೈಭವ್ ಮೌನೇಶ್, ಲತೇಶ್, ನಿಕಿತ್, ಸಾತ್ವಿಕ್, ಶಶಾಂಕ್, ರಂಜನ್ ಪ್ರಮುಖರು ಹಾಜರಿದ್ದರು.