ನ್ಯೂಸ್ ನಾಟೌಟ್ : ಇದುವರೆಗೆ ಈತ ದೇಶಾದ್ಯಂತ 259 ಯುವತಿಯರು/ ಮಹಿಳೆಯರನ್ನು ನಂಬಿಸಿ ಮೋಸ ಮಾಡಿದ್ದ ಎನ್ನಲಾಗಿದೆ. ಕೊಯಮತ್ತೂರಿನ ದಂಪತಿ. ಅವರ ಮಗಳಿಗೆ ಮೊದಲೊಂದು ಮದುವೆಯಾಗಿ ಕೆಲವೊಂದು ಸಮಸ್ಯೆಗಳಿಂದ ಸಂಬಂಧ ಮುರಿದುಹೋಗಿತ್ತು. ಎರಡನೇ ಮದುವೆಗಾಗಿ ಮ್ಯಾಟ್ರಿಮೋನಿಯಲ್ಲಿ ಹುಡುಗನನ್ನು ಹುಡುಕುತ್ತಿದ್ರು.
ಈ ವೇಳೆ ಬೆಂಗಳೂರಿನ ರಾಜಾಜಿನಗರ ನಿವಾಸಿ ಪವನ್ ಅಗರವಾಲ್ ಪರಿಚಯ ಆಗಿದ್ದ. ನಿಮ್ಮ ಮಗಳನ್ನು ನಾನು ಮದುವೆಯಾಗುತ್ತೇನೆ ಅಂದಿದ್ದ ಪವನ್ ಅಗರವಾಲ್. ತಾನು ಒಬ್ಬ ಕಸ್ಟಮ್ ಆಫೀಸರ್. ಏನೋ ಕಾರಣದಿಂದ ಮೊದಲ ಮದುವೆ ಮುರಿದಿದೆ. ನಿಮ್ಮ ಮಗಳಿಗೆ ನಾನು ಬಾಳು ಕೊಡ್ತೇನೆ ಅಂದಿದ್ದ. ಒಮ್ಮೆ ಬೆಂಗಳೂರಿಗೆ ಬಂದು ಹೋಗಿ, ಮಾತಾಡೋಣ ಎಂದಿದ್ದ ಎನ್ನಲಾಗಿದೆ. ಹಾಗೆ ದಂಪತಿ ಮದುವೆ ಮಾತುಕತೆಗಾಗಿ ರೈಲಿನಲ್ಲಿ ಕೊಯಮತ್ತೂರಿನಿಂದ ಬೆಂಗಳೂರಿಗೆ ಬಂದಿದ್ದರು. ನಾನೇ ಸಂಗೊಳ್ಳಿ ರಾಯಣ್ಣ ರೈಲ್ವೇ ಸ್ಟೇಷನ್ಗೆ ಬಂದು ಪಿಕ್ ಮಾಡುತ್ತೇನೆ ಅಂದಿದ್ದ.
ದಂಪತಿ ಖುಷಿಯಾಗಿದ್ದರು. ಎಂಥಾ ಅಳಿಯನನ್ನು ಪಡೆಯಲಿದ್ದೇವೆ ಅಂತ. ಹಾಗೆ ಅವರು ಬೆಂಗಳೂರಿಗೆ ಹತ್ತಿರವಾಗುತ್ತಿದ್ದಂತೆಯೇ ಪವನ್ ಅಗರ್ವಾಲ್ ಕರೆ ಬಂತು. ನಂಗೆ ಸ್ವಲ್ಪ ಬೇರೆ ಕೆಲಸ ಇರುವುದರಿಂದ ನಂಗೆ ಬರ್ಲಿಕೆ ಆಗ್ತಾ ಇಲ್ಲ. ನಿಮ್ಮನ್ನು ಕರೆದುಕೊಂಡು ಬರುವುದಕ್ಕಾಗಿ ನನ್ನ ಚಿಕ್ಕಪ್ಪ ಬರ್ತಾ ಇದ್ದಾರೆ ಅಂದ. ಈ ದಂಪತಿಗೆ ಇನ್ನಷ್ಟು ಖುಷಿ. ಅಪ್ಪ, ಚಿಕ್ಕಪ್ಪ ಎಲ್ಲರೂ ಜತೆಯಾಗಿ, ಚೆನ್ನಾಗಿರುವ ಕುಟುಂಬಕ್ಕೆ ಮಗಳು ಹೋದರೆ ಎಷ್ಟು ಚೆನ್ನಾಗಿರುತ್ತದಲ್ಲಾ ಎಂದು! ಅದಾಗಿ ಸ್ವಲ್ಪ ಹೊತ್ತಲ್ಲಿ ಪವನ್ನ ಚಿಕ್ಕಪ್ಪ ರೈಲ್ವೆ ನಿಲ್ದಾಣಕ್ಕೆ ಬಂದೇ ಬಿಟ್ಟರು. ಆಗ ಪವನ್ ಮತ್ತೆ ಫೋನ್ ಮಾಡಿದ.
ʻʻಅಯ್ಯೋ ನಾನು ಚಿಕ್ಕಪ್ಪನಿಗೆ ಟಿಕೆಟ್ ರಿಸರ್ವೇಷನ್ ಮಾಡಿಕೊಂಡು ಬನ್ನಿ ಅಂತ ಹೇಳಿದ್ದೆ. ಅವರು ನೋಡಿದರೆ ಪರ್ಸ್ ಇಲ್ಲವೇ ಬಿಟ್ಟು ಹೋಗಿದ್ದಾರೆ. ದಯವಿಟ್ಟು ಅವರಿಗೆ 10000 ರೂ. ಕೊಡಬಹುದಾ? ಅವರು ಟಿಕೆಟ್ ರಿಸರ್ವೇಷನ್ ಮಾಡಿಸಿಕೊಂಡು ನಿಮ್ಮನ್ನು ಕರೆದುಕೊಂಡು ಮನೆಗೆ ಬರುತ್ತಾರೆʼʼ ಅಂದ. ದಂಪತಿ ತುಂಬ ಖುಷಿಯಿಂದ 10000 ರೂ. ಹಣವನ್ನು ಪವನ್ನ ಚಿಕ್ಕಪ್ಪನಿಗೆ ಕೊಟ್ಟರು. ಚಿಕ್ಕಪ್ಪ ಹಣವನ್ನು ಪಡೆದು ನೀವು ಇಲ್ಲೇ ಇರಿ, ರಿಸರ್ವೇಷನ್ ಮಾಡಿಸಿಕೊಂಡು ಬರ್ತೇನೆ ಎಂದು ರಿಸರ್ವೇಷನ್ ಕೌಂಟರ್ ಕಡೆಗೆ ಹೋದರು. ಆದರೆ, ಎಷ್ಟು ಹೊತ್ತಾದರೂ ಬರಲಿಲ್ಲ. ಹುಡುಕಿದರೂ ಸಿಗಲಿಲ್ಲ. ಕೊನೆಗೆ ಚಿಕ್ಕಪ್ಪ ಮಿಸ್ ಆಗಿದ್ದಾರೆ ಎಂದು ಪವನ್ ಅಗರ್ವಾಲ್ಗೆ ಹೇಳೋಣ ಎಂದು ಕರೆ ಮಾಡಿದರೆ ಆ ಮೊಬೈಲ್ ಕೂಡಾ ಸ್ವಿಚ್ ಆಫ್. ಈತನ ಹಲವು ಪ್ರಕರಣಗಳನ್ನು ಬೆನ್ನುಹಿಡಿದು ಅವನನ್ನು ಖೆಡ್ಡಾಕ್ಕೆ ಹಾಕಿಯೇ ಬಿಟ್ಟ ಪೊಲೀಸರಿಗೆ ದೊಡ್ಡ ಅಚ್ಚರಿಯೊಂದು ಕಾದಿತ್ತು.
ಈ ವಂಚಕ ಒಬ್ಬ ಯುವಕನಾಗಿರಲಿಲ್ಲ. ಅವನೊಬ್ಬ ಮಧ್ಯ ವಯಸ್ಕನಾಗಿದ್ದ. ಹಾಗೆ ಬಂಧಿತನಾದವನ ಹೆಸರು ಪವನ್ ಅಗರ್ವಾಲ್ ಕೂಡಾ ಆಗಿರಲಿಲ್ಲ. ಅವನು ನರೇಶ್ ಪುರಿ ಗೋಸ್ವಾಮಿ. ಅವನು ಯಾಕೆ ಹೀಗೆ ಮಾಡಿದ? ಬೇರೆ ಯಾರಿಗಾದರೂ ವಂಚನೆ ಮಾಡಿದ್ದಾನಾ? ಅವನ ಉದ್ದೇಶವೇನು ಎಂದು ಕೆದಕುತ್ತಾ ಹೋದಾಗ ಪೊಲೀಸರು ಮತ್ತೊಮ್ಮೆ ಬೆಚ್ಚಿ ಬಿದ್ದರು. ಯಾಕೆಂದರೆ ಅವನು ಮೋಸ ಮಾಡಿದ್ದು ಒಬ್ಬಿಬ್ಬರಿಗಲ್ಲ. ಅಂದಾಜು 259 ಮಂದಿಗೆ ಹೀಗೇ ಮಾಡಿದ್ದ ಎನ್ನಲಾಗಿದೆ. ಒಂದು ವಾಟ್ಸ್ ಆಪ್ ಗ್ರೂಪ್ ಮಾಡಿದ್ದ. ಇದರಲ್ಲಿ ಹೆಚ್ಚು ಇರುವುದೇ ವಿವಾಹಾಕಾಂಕ್ಷಿ ಮಹಿಳೆಯರು. ಅದರ ಹೆಸರು ಅಗರ್ ಸೇನ್ ವೈವಾಹಿಕ್ ಮಂಚ್. ಯಾರ್ಯಾರು ವಿವಾಹಾಪೇಕ್ಷಿಗಳು ಇರುತ್ತಾರೋ ಅವರನ್ನು ಗುರುತಿಸಿ ತನ್ನ ಗ್ರೂಪ್ಗೆ ಸೇರಿಸುತ್ತಿದ್ದ.
ಅಲ್ಲಿ ಅವರಿಗೆ ಗ್ರೂಪ್ನಲ್ಲಿ ಬೇರೆ ವಿವಾಹಾಪೇಕ್ಷಿಗಳ ಮಾಹಿತಿ ಕೊಡುತ್ತಿದ್ದ. ಅವನು ಪತ್ರಿಕೆಗಳಲ್ಲಿ ಬರುವ ವರ ಬೇಕಾಗಿದ್ದಾನೆ ಮತ್ತು ವಧು ಬೇಕಾಗಿದ್ದಾಳೆ ಜಾಹೀರಾತು ನೋಡಿಕೊಂಡು ಅವರನ್ನು ಸಂಪರ್ಕ ಮಾಡುತ್ತಿದ್ದ. ಅವನ್ನು ಗ್ರೂಪ್ಗೆ ಸೇರಿಸುತ್ತಿದ್ದ. ಗ್ರೂಪ್ನಲ್ಲಿ ತನ್ನ ನೈಜ ಫೋಟೊ ಬಳಸುತ್ತಿರಲಿಲ್ಲ. ಬದಲಾಗಿ ಯುವಕನೆಂದು ಬಿಂಬಿಸಲು ಬೇರೆ ಫೋಟೊ ಹಾಕುತ್ತಿದ್ದ. ಹೀಗೆ ನೂರಾರು ಯುವತಿಯನ್ನು ಗುಡ್ಡೆ ಹಾಕಿಕೊಂಡು ಒಬ್ಬೊಬ್ಬರಿಗೇ ವಂಚನೆ ಮಾಡುತ್ತಿದ್ದ. ಗ್ರೂಪ್ನಲ್ಲಿರುವ ಯುವತಿಯರಿಗೆ ಬೇರೊಂದು ನಂಬರ್ನಿಂದ ಫೋನ್ ಮಾಡುತ್ತಿದ್ದ.
ತಾನು ಅಗರ್ ಸೇನ್ ವೈವಾಹಿಕ್ ಮಂಚ್ನಿಂದ ಮಾಹಿತಿ ಪಡೆದೆ ಎಂದು ಹೇಳಿ ಅವರ ಜತೆ ವಿವಾಹ ಮಾತುಕತೆ ನಡೆಸುತ್ತಿದ್ದ. ಅವರ ಮುಂದೆ ತಾನೊಬ್ಬ ಕಸ್ಟಮ್ ಆಫೀಸರ್, ಐಪಿಎಸ್ ಅಧಿಕಾರಿ ಎಂದೆಲ್ಲ ಹೇಳಿ ಅವರನ್ನು ಇಂಪ್ರೆಸ್ ಮಾಡುತ್ತಿದ್ದ. ಬಳಿಕ ಅವರ ಜತೆ ರೊಮ್ಯಾಂಟಿಕ್ ಆಗಿ ಮಾತನಾಡುತ್ತಿದ್ದ. ಅದೂ ರಾತ್ರಿ ಹೊತ್ತು. ಒಂದು ಹಂತ ದಾಟಿ ಯುವತಿಯರು ತನ್ನ ಮೇಲೆ ನಂಬಿಕೆ ಇಟ್ಟರು ಎಂದುಕೊಳ್ಳುವಾಗಲೇ ಅವರ ಬಳಿ ನಾಜೂಕಾಗಿ ಹಣ ಪಡೆಯುತ್ತಿದ್ದ. ಹಾಗೆ ಅವನಿಗೆ ಒಂದು ನಿರ್ದಿಷ್ಟ ಮೊತ್ತ ಸಿಕ್ಕಿದ ಕೂಡಲೇ ಆ ನಂಬರ್ ಸ್ವಿಚ್ ಆಫ್ ಆಗುತ್ತಿತ್ತು. ಆತ ಮಹಿಳೆಯರ ಜತೆಗೆ ರೊಮ್ಯಾಂಟಿಕ್ ಆಗಿ ಮಾತನಾಡಿದ್ದಾನೆ. ಆದರೆ, ಯಾರನ್ನೂ ದುರುಪಯೋಗ ಮಾಡಿಕೊಂಡ ಬಗ್ಗೆ ದೂರುಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Story Cr: Vistara News kannada