ನ್ಯೂಸ್ ನಾಟೌಟ್: ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿ ಸುಪ್ರೀಂ ಕೋರ್ಟ್ ಆದೇಶದ ಬಳಿಕ ಜೀವಾವಧಿ ಶಿಕ್ಷಾ ಬಂಧಿಯಾಗಿರುವ ಉಮೇಶ್ ರೆಡ್ಡಿ ಅಲಿಯಾಸ್ ಬಿಎ ಉಮೇಶ್ ತಾಯಿ ಸೆಂಟಿಮೆಂಟ್ ಬಳಸಿ ಪೆರೋಲ್ ಪಡೆಯಲು ಪ್ರಯತ್ನಿಸಿದ್ದಾನೆ. ಆದರೆ, ತಾಯಿಯ ಜೊತೆ ಕಳೆಯಲು, ಅವರ ಯೋಗ ಕ್ಷೇಮ ವಿಚಾರಿಸಲು 30 ದಿನ ಪೆರೋಲ್ ಬೇಕು ಎಂಬ ಆತನ ಬೇಡಿಕೆಯನ್ನು ಕರ್ನಾಟಕ ಹೈಕೋರ್ಟ್ ತಳ್ಳಿ ಹಾಕಿದೆ. ಎಲ್ಲರಿಗೂ ತಿಳಿದಿರುವಂತೆ ಉಮೇಶ್ ರೆಡ್ಡಿ ಒಬ್ಬ ರೇಪಿಸ್ಟ್. ಅತ್ಯಂತ ವಿಕೃತ ಕಾಮಿ.
ಆತನ ಮೇಲೆ ಹತ್ತಾರು ಪ್ರಕರಣಗಳಿವೆ. ಮಹಿಳೆಯರನ್ನು ಅತ್ಯಂತ ಹೀನಾಯವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡುತ್ತಿದ್ದ ಆತ, ಮಹಿಳೆಯರ ಒಳ ಉಡುಪುಗಳನ್ನು ಕದಿಯುವಷ್ಟು ವಿಕೃತನಾಗಿದ್ದ. ಹಲವು ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ ಉಮೇಶ್ ರೆಡ್ಡಿಯನ್ನು 1998ರ ಮಾರ್ಚ್ 2ರಂದು ಐಪಿಸಿ ಸೆಕ್ಷನ್ ಗಳಾದ 302, 376 ಮತ್ತು 392 ಅಡಿ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಮರಡಿ ಸುಬ್ಬಯ್ಯ ಅವರ ಪತ್ನಿ ಜಯಶ್ರೀ ಅವರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪ ಉಮೇಶ್ ರೆಡ್ಡಿಯ ಮೇಲಿತ್ತು. 26-10-2006ರಂದು ರೆಡ್ಡಿಯನ್ನು ಅಪರಾಧಿ ಎಂದು ಘೋಷಿಸಿ, ಆತನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.
2009ರ ಫೆ. 18ರಂದು ಹೈಕೋರ್ಟ್ನ ತ್ರಿಸದಸ್ಯ ಪೀಠವು ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಕಾಯಂಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ 2011ರ ಫೆ. 1ರಂದು ವಜಾ ಮಾಡಿತ್ತು. ಅಂದೇ ಆತ ರಾಜ್ಯಪಾಲರಿಗೆ ಬಳಿಕ ರಾಷ್ಟ್ರಪತಿಗಳಿಗೆ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದ. ಅದು ತಿರಸ್ಕೃತಗೊಂಡಿತ್ತು.