ನ್ಯೂಸ್ ನಾಟೌಟ್:ಸತು ದೇಹವನ್ನು ಸದೃಢವಾಗಿಸುತ್ತದೆ ಎಂದು ನಾಣ್ಯಗಳು ಹಾಗೂ ಅಯಸ್ಕಾಂತಗಳನ್ನು ನುಂಗಿದ್ದ ವ್ಯಕ್ತಿಯೊಬ್ಬನ ಹೊಟ್ಟೆಯಿಂದ ಸುಮಾರು 39 ನಾಣ್ಯಗಳು (Coins) ಮತ್ತು 37 ಅಯಸ್ಕಾಂತಗಳನ್ನು (Magnets) ವೈದ್ಯರು ಹೊರತೆಗೆದ ವಿಚಾರ ಇದೀಗ ಭಾರಿ ವೈರಲ್ ಆಗುತ್ತಿದೆ.
ದಿಲ್ಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ವೈದ್ಯರ ತಂಡವು ವ್ಯಕ್ತಿಯೊಬ್ಬನ ಕರುಳಿಗೆ ಸರ್ಜರಿ ನಡೆಸಿ, ಬರೋಬ್ಬರಿ 39 ನಾಣ್ಯಗಳು ಹಾಗೂ 37 ಆಯಸ್ಕಾಂತಗಳನ್ನು ಹೊರಗೆ ತೆಗೆದಿದ್ದಾರೆ. ಮನೋವೈದ್ಯಕೀಯ ಸಮಸ್ಯೆ ಹೊಂದಿರುವ ವ್ಯಕ್ತಿ, ಬಾಡಿ ಬಿಲ್ಡಿಂಗ್ಗೆ ಜಿಂಕ್ ಸಹಾಯ ಮಾಡುತ್ತದೆ ಎಂಬ ಕಲ್ಪನೆಯಿಂದ ನಾಣ್ಯಗಳು ಮತ್ತು ಮ್ಯಾಗ್ನೆಟ್ಗಳನ್ನು ನುಂಗಿದ್ದ ಎಂದು ವರದಿಯಾಗಿದೆ.
ಕಳೆದ 20ಕ್ಕೂ ಹೆಚ್ಚು ದಿನಗಳಿಂದ ಸತತ ವಾಂತಿ ಹಾಗೂ ಹೊಟ್ಟೆ ನೋವಿನ ಸಮಸ್ಯೆ ಹೊಂದಿದ್ದ 26 ವರ್ಷದ ವ್ಯಕ್ತಿಯನ್ನು ಸರ್ ಗಂಗಾ ರಾಮ್ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ಗೆ ದಾಖಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಆ ರೋಗಿ ಯಾವುದೇ ಆಹಾರ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ.ರೋಗಿಯ ಸಂಬಂಧಿಕರು ಆತನ ಹೊಟ್ಟೆಯ ಎಕ್ಸ್ ರೇ ತೆಗೆಸಿದ್ದರು. ಆತನ ಹೊಟ್ಟೆಯ ಒಳಗೆ ನಾಣ್ಯಗಳು ಮತ್ತು ಆಯಸ್ಕಾಂತಗಳ ಆಕಾರದ ನೆರಳು ಕಾಣಿಸುತ್ತಿತ್ತು. ಅದರ ಮೂಲಕ ಬೆಳಕು ಹಾದು ಹೋಗದಷ್ಟು ದಟ್ಟವಾಗಿ ತುಂಬಿಕೊಂಡಿದ್ದವು. ಉದರದ ಸಿ ಟಿ ಸ್ಕ್ಯಾನ್ ಮಾಡಿಸಿದಾಗ, ಭಾರಿ ಪ್ರಮಾಣದ ನಾಣ್ಯ ಹಾಗೂ ಆಯಸ್ಕಾಂತಗಳು ಕರುಳಿನ ಬ್ಲಾಕೇಜ್ಗೆ ಕಾರಣವಾಗಿರುವುದು ಕಂಡುಬಂದಿತ್ತು. ಇದು ಅಪಾಯಕಾರಿ ಸ್ಥಿತಿಯಲ್ಲಿ ಇದ್ದಿದ್ದರಿಂದ ಕೂಡಲೇ ಆತನಿಗೆ ಶಸ್ತ್ರಚಿಕಿತ್ಸೆ ನಡೆಸಲು ತೀರ್ಮಾನಿಸಲಾಯಿತು.ಕರುಳುಗಳನ್ನು ತೆರೆದು ಅವುಗಳ ಒಳಗಿದ್ದ ನಾಣ್ಯ ಹಾಗೂ ಆಯಸ್ಕಾಂತಗಳನ್ನು ಹೊರಗೆ ತೆಗೆಯಲಾಯಿತು. ಎರಡೂ ತುದಿಗಳನ್ನು ವಿಭಿನ್ನ ಅನಾಸ್ಟೋಮೊಸಿಸ್ ಸರ್ಜರಿ ಮೂಲಕ ಮರುಜೋಡಣೆ ಮಾಡಲಾಯಿತು.