ನ್ಯೂಸ್ ನಾಟೌಟ್: ಕೇರಳದ ವಯನಾಡಿನಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಕರ್ನಾಟಕ ಸರ್ಕಾರ ಘೋಷಿಸಿದ್ದ ಪರಿಹಾರವನ್ನು ಮೃತರ ಕುಟುಂಬಸ್ಥರು ತಿರಸ್ಕರಿಸಿದ್ದಾರೆ ಎಂದು ವರದಿ ತಿಳಿಸಿದೆ. ಫೆಬ್ರವರಿ 10ರಂದು ಪ್ರಜೇಶ್ ಎನ್ನುವವರು ವಯನಾಡಿನಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರು.
ವಯನಾಡು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕ್ಷೇತ್ರವಾಗಿದ್ದು, ಈ ಭಾಗದಲ್ಲಿ ಕಾಡಾನೆ ದಾಳಿಯಿಂದ ವ್ಯಕ್ತಿ ಸಾವನ್ನಪ್ಪಿರುವುದು ಭಾರೀ ಸುದ್ದಿಯಾಗಿತ್ತು. ಪ್ರಜೇಶ್ ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ವೇಳೆ ರಾಹುಲ್ ಗಾಂಧಿ ಭಾರತ ಜೋಡೋ ನ್ಯಾಯ ಯಾತ್ರೆ ನಡೆಸುತ್ತಿದ್ದರು. ತಮ್ಮ ಕ್ಷೇತ್ರದಲ್ಲಿ ಕಾಡಾನೆ ದಾಳಿ ವಿಷಯ ಮುಟ್ಟುತ್ತಿದ್ದಂತೆ ರಾಹುಲ್ ಗಾಂಧಿ ಭಾರತ ಜೋಡೋ ನ್ಯಾಯ ಯಾತ್ರೆ ಮೊಟಕುಗೊಳಿಸಿ ವಯನಾಡಿಗೆ ತೆರಳಿದ್ದರು. ವಯನಾಡಿಗೆ ತೆರಳಿದ್ದ ರಾಹುಲ್ ಗಾಂಧಿ ಪ್ರಜೇಶ್ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿ ಪರಿಹಾರದ ಭರವಸೆ ನೀಡಿದ್ದರು.
ಕಾಡಾನೆ ದಾಳಿ ಹಾಗೂ ಹಿನ್ನೆಲೆಯನ್ನು ವಿಚಾರಣೆ ನಡೆಸಲಾಗಿತ್ತು. ಈ ವೇಳೆ ವಯನಾಡಿನಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಗೆ ಕರ್ನಾಟಕ ಸರ್ಕಾರ ಪರಿಹಾರ ಘೋಷಿಸಿತ್ತು. ಕರ್ನಾಟಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹದಿನೈದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದರು. ಕೇರಳ ರಾಜ್ಯದಲ್ಲಿ ಸಾವನ್ನಪ್ಪಿದ ವ್ಯಕ್ತಿಗೆ ಕರ್ನಾಟಕ ಸರ್ಕಾರ ಪರಿಹಾರ ಘೋಷಣೆ ಮಾಡಿರುವುದಕ್ಕೆ ರಾಜ್ಯ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.
ವಯನಾಡು ರಾಹುಲ್ ಗಾಂಧಿಯವರ ಲೋಕಸಭಾ ಕ್ಷೇತ್ರವಾಗಿದೆ. ಹೀಗಾಗಿ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸುವುದಕ್ಕಾಗಿ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ರಾಜ್ಯದಲ್ಲಿ ಹತ್ತಾರು ಜನರು ಕಾಡಾನೆ ದಾಳಿಯಿಂದ ಸಾಯುತ್ತಿದ್ದಾರೆ. ಕೋಟ್ಯಂತರ ರೂಪಾಯಿ ಬೆಳೆ ಈಗಾಗಲೇ ನಾಶವಾಗಿದೆ. ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ನೀಡುವಂತೆ ಚಿಕ್ಕಮಗಳೂರು, ಹಾಸನ ಹಾಗೂ ರಾಮನಗರ ಸೇರಿದಂತೆ ರಾಜ್ಯದ ವಿವಿಧ ಭಾಗದ ಜನರು ತೀವ್ರ ಒತ್ತಾಯಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೇರಳ ರಾಜ್ಯದಲ್ಲಿ ಸಾವನ್ನಪ್ಪಿದ ವ್ಯಕ್ತಿಗೆ ಕಾಂಗ್ರೆಸ್ ಸರ್ಕಾರ ಹದಿನೈದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು.
ಕಳೆದ ವರ್ಷ ನವೆಂಬರ್ 30ರಂದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಗಂಡು ಆನೆಯನ್ನು ಸೆರೆಹಿಡಿಯಲಾಗಿತ್ತು. ಅದನ್ನು ಬಂಡೀಪುರ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಆ ಆನೆಯು ಕೇರಳದ ವಯನಾಡ್ ಜಿಲ್ಲೆಗೆ ದಾರಿ ತಪ್ಪಿ ತೆರಳಿದ್ದು, ವಯನಾಡ್ನಲ್ಲಿ ದಾಳಿ ನಡೆಸಿದೆ ಎನ್ನಲಾಗಿತ್ತು. ಕರ್ನಾಟಕದಿಂದ ತೆರಳಿದ ಆನೆಯಿಂದ ಸಾವು ಸಂಭವಿಸಿದ್ದು, ಮೃತ ವ್ಯಕ್ತಿಗೆ ಪರಿಹಾರ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚಿಸಿ ಪರಿಹಾರ ಘೋಷಿಸಿದ್ದರು. ಆದರೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮೃತ ಪ್ರಜೇಶ್ ಕುಟುಂಬಸ್ಥರು ಪರಿಹಾರ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.