ನ್ಯೂಸ್ ನಾಟೌಟ್ :ಐದು ಗ್ಯಾರಂಟಿಗಳು ಕರ್ನಾಟಕದಲ್ಲಿ ಯಶಸ್ವಿಯಾದ ಬಳಿಕ ತೆಲಂಗಾಣದಲ್ಲಿಯೂ ಈ ಪ್ರಯೋಗ ನಡೆಯಿತು.ಇದೀಗ ಆಂಧ್ರ ಪ್ರದೇಶದಲ್ಲೂ ಅದೇ ಗ್ಯಾರಂಟಿ ಸ್ಟ್ರಾಟಜಿಯನ್ನು ಕಾಂಗ್ರೆಸ್ ಮುಂದುವರಿಸಿದೆ.ಚುನಾವಣಾ ದಿನಾಂಕ ಘೋಷಣೆಯಾಗುವ ಮುನ್ನವೇ ಆಂಧ್ರ ಪ್ರದೇಶದಲ್ಲಿ ಪ್ರಚಾರ ಶುರು ಮಾಡಿರುವ ಕಾಂಗ್ರೆಸ್,ಅರ್ಹ ಬಡ ಕುಟುಂಬಗಳಿಗೆ ಪ್ರತಿ ತಿಂಗಳು 5 ಸಾವಿರ ರೂ. ನೀಡುವುದಾಗಿ ಘೋಷಿಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನಂತಪುರದಲ್ಲಿ ಬಡ ಕುಟುಂಬಗಳಿಗೆ ಹೊಸ ಗ್ಯಾರಂಟಿಯನ್ನು ಘೋಷಿಸಿದರು. ಇದನ್ನು ಕಾಂಗ್ರೆಸ್ ಗ್ಯಾರಂಟಿ ಎಂದು ಅವರು ಕರೆದಿದ್ದಾರೆ. ಕರ್ನಾಟಕದಲ್ಲಿ ಜಾರಿ ಮಾಡಿದ 5 ಗ್ಯಾರಂಟಿ ಹಾಗೂ ತೆಲಂಗಾಣದಲ್ಲಿ ಅನುಷ್ಠಾನಕ್ಕೆ ತಂದಿರುವ 6 ಗ್ಯಾರಂಟಿಗಳಿಗಿಂತ ದೊಡ್ಡ ಗ್ಯಾರಂಟಿ ಎಂದು ಕರೆಯಲಾಗಿದೆ.ಇದು ಗ್ಯಾರಂಟಿ, ಭರವಸೆಯಲ್ಲ. ಭಾರತದ ಯಾವುದೇ ರಾಜ್ಯದಲ್ಲಿರದ ಭರವಸೆಯನ್ನು ಬಡವರಿಗೆ ನಾವು ನೀಡುತ್ತಿದ್ದೇವೆ. ಪ್ರತಿ ಬಡ ಕುಟುಂಬಕ್ಕೆ ತಿಂಗಳಿಗೆ 5,000 ರೂ. ಸಿಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಆಂಧ್ರ ಪ್ರದೇಶದಲ್ಲಿ ಮೊದಲ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ತಮ್ಮ ಭಾಷಣದ ನಡುವೆ ಅಲ್ಲಲ್ಲಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಮಾತನಾಡಿದ್ದು ವಿಶೇಷವಾಗಿತ್ತು. ಅನಂತಪುರ ಕರ್ನಾಟಕದ ಗಡಿಯಲ್ಲಿರುವುದರಿಂದ ಕನ್ನಡಿಗರ ಸಂಖ್ಯೆ ಸ್ವಲ್ಪ ಹೆಚ್ಚೇ ಇದೆ. ಅದಕ್ಕಾಗಿ ಖರ್ಗೆ ಕನ್ನಡದಲ್ಲಿ ಮಾತನಾಡಿದರು.