ನ್ಯೂಸ್ ನಾಟೌಟ್: ‘ಶ್ರೀ ರಾಮ ಜಗತ್ತಿಗೆ ತನ್ನ ಮೌಲ್ಯಗಳನ್ನು ಸಾರಿದ. ಹೀಗಾಗಿ ಇಂದಿಗೂ ಆತನ ನಾಮಸ್ಮರಣೆ ಜಗತ್ತಿನಾದ್ಯಂತ ನಡೆಯುತ್ತಿದೆ’ ಎಂದು ಶ್ರೀ ಆದಿ ಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ಭಾನುವಾರ ಸುಳ್ಯದ ಶ್ರೀರಾಮಮಂದಿರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಭಜನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು. ‘ಮನುಷ್ಯನ ಬದುಕು ಸುಂದರವಾಗಬೇಕೆಂದರೆ ಆತನ ಬದುಕಿನ ಯತಾರ್ಥ ಜ್ಞಾನ ಆಗಬೇಕೆಂದರೆ ಅವನ ಹುಟ್ಟಿನ ಉದ್ದೇಶ ಗುರಿ ತಲುಪಬೇಕೆಂದರೆ ಶ್ರೀರಾಮನ ಆದರ್ಶಗಳನ್ನು ಪಾಲಿಸಬೇಕು’ ಎಂದು ತಿಳಿಸಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಅಧ್ಯಕ್ಷ ಡಾ| ಕೆ.ವಿ ಚಿದಾನಂದ, ಧರ್ಮದರ್ಶಿ ಮಂಡಳಿ ಅಧ್ಯಕ್ಷ ಉಪೇಂದ್ರ ಪ್ರಭು, ಶಾಸಕಿ ಭಾಗೀರಥಿ ಮುರುಳ್ಯ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಮಧ್ವಾಧೀಶ ವಿಠಲದಾಸ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆ, ಪದ್ಮಶ್ರೀ ಗಿರೀಶ್ ಭಾರದ್ವಾಜ್, ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ | ಲೀಲಾಧರ್ ಡಿ.ವಿ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.