ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಕ್ಯಾನ್ಸರ್ ಒಂದು ಮಾರಕ ರೋಗ. ಇದರಲ್ಲಿ ಬೇರೆ ಬೇರೆ ವಿಧಗಳಿವೆ. ಅವುಗಳಲ್ಲೊಂದು ಗರ್ಭಕಂಠದ ಕ್ಯಾನ್ಸರ್. ಮಹಿಳೆಯರನ್ನು ಅತಿಯಾಗಿ ಕಾಡುವ ಈ ಕ್ಯಾನ್ಸರ್ ತುಂಬಾ ಅಪಾಯಕಾರಿ. ಮೊದಲ ಹಂತದಲ್ಲಿ ಗೊತ್ತಾದರೆ ಗುಣಪಡಿಸಬಹುದಾದರೂ ಹೆಚ್ಚಿನವರಿಗೆ ಪ್ರಾರಂಭದಲ್ಲಿ ಇದರ ಲಕ್ಷಣಗಳು ತಿಳಿಯುವುದೇ ಇಲ್ಲ.
ಹೀಗಾಗಿ ಲಸಿಕೆ ಸೇರಿದಂತೆ ಕೆಲವು ಮುನ್ನೆಚ್ಚರಿಕೆಗಳನ್ನು ಮಹಿಳೆಯರು ತೆಗೆದುಕೊಳ್ಳಬೇಕಾಗುತ್ತದೆ. ಹೆಚ್.ಪಿ.ವಿ – ಹ್ಯೂಮನ್ ಪ್ಯಾಪಿಲೋಮಾ ವೈರಸ್ ಇದು ಲೈಂಗಿಕ ಸಮಯದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಮಾನ್ಯ ವೈರಸ್ ಆಗಿದೆ. ಎಲ್ಲರಿಗೂ ತಿಳಿದಿರುವಂತೆ ಅಸುರಕ್ಷಿತ ಲೈಂ* ಗಿಕ ಕ್ರಿಯೆ ಯಾವಾಗಲೂ ಅಪಾಯಕಾರಿಯಾಗಿದೆ. ಕೇವಲ ಗರ್ಭಧಾರಣೆ (pregnancy) ಮಾತ್ರವಲ್ಲ, ಇದರಿಂದಾಗಿ ಅನೇಕ ಸೋಂಕುಗಳು ದೇಹವನ್ನು ಪ್ರವೇಶಿಸುತ್ತವೆ ಮತ್ತು ಗಂಭೀರ ಕಾಯಿಲೆಗಳಿಗೆ (Serious Diseases) ಕಾರಣವಾಗುತ್ತದೆ. ಶೇಕಡಾ 80 ರಷ್ಟು ಜನರು ತಮ್ಮ ಜೀವಿತಾವಧಿಯಲ್ಲಿ HPV ಗೆ ಒಡ್ಡಿಕೊಳ್ಳುತ್ತಾರೆ. HPV ಯಲ್ಲಿ ಸುಮಾರು 200 ವಿಧಗಳಿವೆ. ಅವುಗಳಲ್ಲಿ HPV 6 ಮತ್ತು HPV 11 ಕಡಿಮೆ ಅಪಾಯದ ಪ್ರಕಾರಗಳಾಗಿವೆ.
ಅವುಗಳು ಜನನಾಂಗದ ನರಹುಲಿಗಳಿಗೆ (genital wart) ಕಾರಣವಾಗುತ್ತವೆ. HPV 16 ಮತ್ತು HPV 18 ಪ್ರಕಾರವನ್ನು ಹೆಚ್ಚು ಅಪಾಯಕಾರಿ ಎಂದು ಕರೆಯಲಾಗುತ್ತದೆ. ಅವು ಮಹಿಳೆಯರು ಮತ್ತು ಪುರುಷರಲ್ಲಿ ವಿವಿಧ ಕ್ಯಾನ್ಸರ್ ಳಿಗೆ ಕಾರಣವಾಗುತ್ತವೆ. ಅವು ಗರ್ಭಕಂಠ ಕ್ಯಾನ್ಸರ್, ಗಂಟಲಿನ ಕ್ಯಾನ್ಸರ್, ಗುದದ ಕ್ಯಾನ್ಸರ್, ಮಹಿಳೆಯರಲ್ಲಿ ಯೋನಿ ಕ್ಯಾನ್ಸರ್ ಮತ್ತು ಪುರುಷರಲ್ಲಿ ಶಿಶ್ನದ ಕ್ಯಾನ್ಸರ್ನಂತಹ ವಿವಿಧ ರೀತಿಯ ಕ್ಯಾನ್ಸರ್ಗಳನ್ನು ಉಂಟುಮಾಡಬಹುದು.
ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಹೆಚ್ಚು ಸಾಮಾನ್ಯವಾಗಿದೆ. ಭಾರತದಲ್ಲಿ 1,23,907 ಹೊಸ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ ಮತ್ತು ಅವುಗಳಲ್ಲಿ ಪ್ರತಿ ವರ್ಷ 77,348 ಸಾವುಗಳು ಸಂಭವಿಸುತ್ತದೆ. ಭಾರತದಲ್ಲಿ ಪ್ರತಿ 8 ನಿಮಿಷಗಳಿಗೊಮ್ಮೆ ಒಬ್ಬ ಮಹಿಳೆ ಗರ್ಭಕಂಠದ ಕ್ಯಾನ್ಸರ್ ನಿಂದ ಸಾವನ್ನಪ್ಪುತ್ತಾಳೆ. ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ ಅತಿ ಹೆಚ್ಚಾಗಿ ಕಂಡು ಬರುತ್ತದೆ.ಸದ್ಯ ಈ ವೈರಸ್ ನ್ನು (HPV) ತಡೆಗತಟ್ಟಲು ಭಾರತ ಸರ್ಕಾರವು ಹೊಸ ಯೋಜನೆಯನ್ನು ರೂಪಿಸಿದ್ದು ಶಾಲಾ ಬಾಲಕಿಯರಿಗೆ HPV ಲಸಿಕೆಯನ್ನು ಕಡ್ಡಾಯವಾಗಿ ಮತ್ತು ಉಚಿತವಾಗಿ ನೀಡಲು ಮುಂದಾಗಿದೆ.
ಕ್ಯಾನ್ಸರ್ ಸರ್ವಿಕ್ಸ್ (ಗರ್ಭ ಕಂಠದ ಕ್ಯಾನ್ಸರ್ )ಮುಕ್ತ ಭಾರತ
HPV ಲಸಿಕೆ ಹಾಕಿಸಿಕೊಂಡಲ್ಲಿ ಇದು 93-100% ಪರಿಣಾಮಕಾರಿಯಾಗಿದೆ.
ಆದರೆ ಕ್ಯಾನ್ಸರ್ ಪೂರ್ವಭಾವಿ ಸ್ಕ್ರೀನಿಂಗ್ ಮತ್ತು ಚಿಕಿತ್ಸೆ ಅತ್ಯಗತ್ಯ.
ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಸಹ ಅವಶ್ಯಕ.
- 90% ಹುಡುಗಿಯರು 15 ವರ್ಷ ವಯಸ್ಸಿನೊಳಗೆ ಸಂಪೂರ್ಣವಾಗಿ ಲಸಿಕೆ ಹಾಕಬೇಕು ( ಕೆಳಗೆ ಸೂಚಿಸಲಾದ ಡೋಸ್ ಗೆ ಅನುಗುಣವಾಗಿ) .
- ಶೇಕಡಾ 70 ರಷ್ಟು ಮಹಿಳೆಯರು ತಮ್ಮ 35-45 ವರ್ಷ ವಯಸ್ಸಿನೊಳಗಾಗಿ ಹೆಚ್ಚಿನ ಕಾರ್ಯಕ್ಷಮತೆಯ ಪರೀಕ್ಷೆಗಳಿಂದ ಪರೀಕ್ಷಿಸಬೇಕು.
- ಗರ್ಭಕಂಠದ ಕಾಯಿಲೆ ಇರುವ ಶೇಕಡಾ 90 ರಷ್ಟು ಮಹಿಳೆಯರು ಚಿಕಿತ್ಸೆ ಪಡೆಯಬೇಕು.
ಭಾರತದಲ್ಲಿ 3 ವಿಧದ ಲಸಿಕೆಗಳಿವೆ.
1) ಗಾರ್ಡಸಿಲ್-4(6, 11,16,18)
2) ಗಾರ್ಡಸಿಲ್-9(6,11,16, 18,31,33,45,52,58)
3) ಸರ್ವವಾಕ್-(6, 11,16,18)
ಇದು ಹುಡುಗಿಯರಿಗೆ ಮಾತ್ರವಲ್ಲ 9-14 ವರ್ಷ ವಯಸ್ಸಿನ ಹುಡುಗರು ಈ ಲಸಿಕೆಯನ್ನು ತೆಗೆದುಕೊಳ್ಳಬಹುದು. ಆದರೆ ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವ ಕಾರಣ, ಅವರಿಗೆ ಆದ್ಯತೆ ಹೆಚ್ಚು.
9 ರಿಂದ 14 ವರ್ಷದವರು – 2 ಡೋಸ್, ಅದರಲ್ಲಿ 1 ಡೋಸ್ ಆದ ನಂತರ 6 ತಿಂಗಳ ಅಂತರದಲ್ಲಿ ಎರಡನೇ ಡೋಸ್ ಅನ್ನು ತೆಗೆದುಕೊಳ್ಳಬೇಕು, ಗರಿಷ್ಠ 1 ವರ್ಷದೊಳಗೆ ಎರಡು ಡೋಸ್ ಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. 15 ರಿಂದ 26 ವರ್ಷ ವಯಸ್ಸಿನ ಹುಡುಗಿಯರಿಗೆ – 3 ಡೋಸ್ ಲಸಿಕೆ ಅಗತ್ಯವಿದೆ.ಕ್ರಮವಾಗಿ 0, 1-2 ತಿಂಗಳುಗಳು ಮತ್ತು 6 ತಿಂಗಳುಗಳು. ಡೋಸೇಜ್ಗಳನ್ನು 1 ವರ್ಷದ ಒಳಗಾಗಿ ಪೂರ್ಣಗೊಳಿಸಬೇಕು. ಡೋಸ್ ತಪ್ಪಿಸಿಕೊಂಡರೆ ವೇಳಾಪಟ್ಟಿಯಲ್ಲಿದ್ದಂತೆ ಪ್ರಾರಂಭಿಸುವ ಅಗತ್ಯವಿಲ್ಲ, ಮುಂದಿನ ಡೋಸ್ ತೆಗೆದುಕೊಳ್ಳಬಹುದಾಗಿದೆ.
ಲಸಿಕೆ ತೆಗೆದುಕೊಂಡ ನಂತರ ಕೆಲವರಿಗೆ ತಲೆತಿರುಗುವಿಕೆ, ನೋವು, ಕೆಂಪು, ಇಂಜೆಕ್ಷನ್ ಸ್ಥಳದಲ್ಲಿ ಊತ, ಜ್ವರ, ತಲೆನೋವು ದೇಹದ ನೋವು ಮುಂತಾದವು ಕಂಡುಬರಬಹುದು. ತೀವ್ರವಾದ ಅನಾರೋಗ್ಯ, ಗರ್ಭಿಣಿ ಅಥವಾ ಯಾರಿಗಾದರೂ ಲಸಿಕೆಗೆ ಅಲರ್ಜಿ ಇದ್ದರೆ ಇದನ್ನು ತೆಗೆದುಕೊಳ್ಳಬಾರದು. ನಮ್ಮಲ್ಲಿ ರೋಗನಿರೋಧಕ ಶಕ್ತಿ ಇದೆ ಎನ್ನುವ ಭರವಸೆ ಇದ್ದರೂ ಸಹ ಸ್ಕ್ರೀನಿಂಗ್ ಕಾರ್ಯವಿಧಾನವನ್ನು ಅನುಸರಿಸುವ ಅಗತ್ಯವಿರುತ್ತದೆ.
21-29 ವರ್ಷದವರು – ಪ್ರತಿ 3 ವರ್ಷಗಳಿಗೊಮ್ಮೆ ಪ್ಯಾಪ್ ಸ್ಮೀಯರ್ ಪರೀಕ್ಷೆ ಮಾಡಿಸಿಕೊಳ್ಳತಕ್ಕದ್ದು ಹಾಗೂ 30 ರಿಂದ 65 ವರ್ಷದವರು ಕೋಟೆಸ್ಟ್ (ಪ್ಯಾಪ್ ಸ್ಮೀಯರ್+HPV ಪರೀಕ್ಷೆ) ಪ್ರತಿ 5 ವರ್ಷಗಳಿಗೊಮ್ಮೆ ಮಾಡಿಕೊಳ್ಳತಕ್ಕದ್ದು. ಬಹಳ ಮುಖ್ಯವಾಗಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಸ್ಕ್ರೀನಿಂಗ್ ಪರೀಕ್ಷೆ ಸಾಕು ಆದರೆ ಅದರ ವ್ಯಾಪ್ತಿಯು ಕೇವಲ 3% ಮಾತ್ರ. ಹಾಗಾಗಿ ವ್ಯಾಕ್ಸಿನೇಷನ್ ಮತ್ತು ಸ್ಕ್ರೀನಿಂಗ್ ಇದು ಎರಡರ ಸಂಯೋಜನೆಯು ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ಗರಿಷ್ಟ ಪರಿಣಾಮವನ್ನು ಬೀರುತ್ತದೆ. ಸ್ಕ್ರೀನಿಂಗ್ ಪರೀಕ್ಷೆಯಲ್ಲಿ ಮಹಿಳೆಗೆ 5-10 ವರ್ಷಗಳ ಮುಂಚಿತವಾಗಿ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ನಾವು ತಿಳಿದುಕೊಳ್ಳಬಹುದು.
HPV ಲೈಂಗಿಕವಾಗಿ ಹರಡುವ ಸೋಂಕು ಆಗಿದ್ದು ಕೈಗಳನ್ನು ಹಿಡಿದುಕೊಳ್ಳುವುದು, ಅಪ್ಪಿಕೊಳ್ಳುವುದು, ಶೌಚಾಲಯದ ಆಸನಗಳು, ಈಜುಕೊಳಗಳು, ಆಹಾರ ಹಂಚಿಕೊಳ್ಳುವುದು, ಪಾತ್ರೆಗಳನ್ನು ಹಂಚಿಕೊಳ್ಳುವುದರಿಂದ ಇದು ಹರಡುವುದಿಲ್ಲ.
ಹಾಗಾಗಿ ಸುಖಾಸುಮ್ಮನೆ ಹೆದರುವ ಅಗತ್ಯವಿರುವುದಿಲ್ಲ. ಸರ್ಕಾರವು ಶಾಲಾ ಬಾಲಕಿಯರಿಗೆ HPV ಲಸಿಕೆಯನ್ನು ಕಡ್ಡಾಯವಾಗಿ ಮತ್ತು ಉಚಿತವಾಗಿ ನೀಡಲು ಹೊರಟಿದೆ. ಭಾರತೀಯ ನಿರ್ಮಿತ ಲಸಿಕೆ CERVAVAC ಭಾರತೀಯರ ಭರವಸೆಯ ಮಾರ್ಗವಾಗಿದೆ. ಸರ್ವಿಕಲ್ ಕ್ಯಾನ್ಸರ್ ಮುಕ್ತ ಭಾರತ ಮಾಡಲು ಕೈ ಜೋಡಿಸೋಣ.