ನ್ಯೂಸ್ ನಾಟೌಟ್: ಹಣ ಮತ್ತು ದುಷ್ಚಟಗಳ ಮುಂದೆ ತಾಯಿ – ತಂದೆ ಎಂಬ ಬಾಂಧವ್ಯಗಳೂ ಕೂಡ ನಗಣ್ಯವಾಗುತ್ತವೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಮುಂದೆಆನ್ ಲೈನ್ ಗೇಮ್ಸ್ ಗೀಳು ಅಂಟಿಸಿಕೊಂಡಿದ್ದ ಯುವಕನೋರ್ವ ಜೀವ ವಿಮಾ ಹಣಕ್ಕಾಗಿ ತನ್ನ ತಾಯಿಯನ್ನೇ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಫತೇಹ್ ಪುರದಲ್ಲಿ ನಡೆದಿದೆ.
ಹಿಮಾಂಶು ಎಂಬಾತ 50 ಲಕ್ಷ ರೂ ಹಣಕ್ಕಾಗಿ ತಾಯಿಯನ್ನು ಕೊಂದು ಆಕೆಯ ಶವವನ್ನು ಯಮುನಾ ನದಿ ತೀರದಲ್ಲಿ ಹೂತಿದ್ದಾನೆ ಎಂದು ವರದಿ ತಿಳಿಸಿದೆ. ಆರೋಪಿಯು ಜನಪ್ರಿಯ ಪ್ಲಾಟ್ಫಾರ್ಮ್ ಝುಪಿಯಲ್ಲಿ ಗೇಮಿಂಗ್ ಗೆ ಚಟ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆ ವ್ಯಸನದಿಂದ ಅವನು ಹಲವು ಬಾರಿ ನಷ್ಟ ಅನುಭವಿಸಿದ್ದ. ಇದರಿಂದ ಸಾಲ ಮಾಡಿದ್ದ ಎನ್ನಲಾಗಿದೆ.
ಒಂದು ಹಂತದ ನಂತರ ಸುಮಾರು ₹ 4 ಲಕ್ಷ ಸಾಲ ಮಾಡಿದ್ದ. ಸಾಲಗಾರರಿಗೆ ಮರು ಪಾವತಿ ಮಾಡಲೆಂದು ಈತ ತಾಯಿಯ ವಿರುದ್ಧವೇ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹಿಮಾಂಶು, ತನ್ನ ತಂದೆಯ ಚಿಕ್ಕಮ್ಮನ ಚಿನ್ನಾಭರಣಗಳನ್ನು ಕದ್ದೊಯ್ದಿದ್ದ. ಅಲ್ಲದೆ ತನ್ನ ಹೆತ್ತವರಿಗೆ ತಲಾ ₹ 50 ಲಕ್ಷ ಮೌಲ್ಯದ ಜೀವ ವಿಮಾ ಪಾಲಿಸಿಗಳನ್ನು ಖರೀದಿಸಲು ಹಣವನ್ನು ಬಳಸಿದ್ದ ಎನ್ನಲಾಗಿದೆ.
ಇದಾದ ಕೆಲವೇ ದಿನಗಳಲ್ಲಿ ಆತ ತಂದೆ ಇಲ್ಲದಿದ್ದಾಗ ತಾಯಿ ಪ್ರಭಾರನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಸೆಣಬಿನ ಚೀಲದಲ್ಲಿ ಹಾಕಿ ಅದನ್ನು ವಿಲೇವಾರಿ ಮಾಡಲು ಟ್ರ್ಯಾಕ್ಟರ್ ಮೂಲಕ ಯಮುನಾ ನದಿಯ ದಡಕ್ಕೆ ಕೊಂಡೊಯ್ದಿದ್ದ. ಚಿತ್ರಕೂಟ ದೇವಸ್ಥಾನಕ್ಕೆ ತೆರಳಿದ್ದ ಹಿಮಾಂಶುವಿನ ತಂದೆ ರೋಷನ್ ಸಿಂಗ್ ಹಿಂತಿರುಗಿ ಬಂದಾಗ ಮನೆಯಲ್ಲಿ ಪತ್ನಿ ಮತ್ತು ಮಗ ಕಾಣಲಿಲ್ಲ. ಅವನು ಸುತ್ತಮುತ್ತ ಕೇಳಿದ್ದ. ಆಗ ಪಕ್ಕದ ಮನೆಯವರು ಹಿಮಾಂಶು ವನ್ನು ಟ್ರ್ಯಾಕ್ಟರ್ ನಲ್ಲಿ ನದಿಯ ಬಳಿ ನೋಡಿದ್ದಾಗಿ ತಿಳಿಸಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ತನ್ನ ಸಾಲ ತೀರಿಸಲು ಆತ ಈ ಕೃತ್ಯ ನಡೆಸಿದ್ದ ಎಂದು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.