ನ್ಯೂಸ್ ನಾಟೌಟ್: ಸೈಬರ್ ವಂಚಕರು ಬಡವರ ಜನ್ಧನ್ ಖಾತೆಯಿಂದಲೂ ಹಣ ಲಪಟಾಯಿಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ವರದಿ ತಿಳಿಸಿದೆ. ಸೈಬರ್ ವಂಚನೆ ತಡೆಗೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕೆಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ತಂಡವು ಶಿಫಾರಸು ಮಾಡಿದೆ.
ಜತೆಗೆ ‘ಪಿಎಂ ಜನ್ಧನ್ ಯೋಜನೆಯ ಪರಿಣಾಮ ಮತ್ತು ಫಲ’ದ ಕುರಿತಂತೆ ಸಂಶೋಧನೆ ನಡೆಸಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿದೆ. ಬೆಂಗಳೂರು ವಿಶ್ವವಿದ್ಯಾಲಯದ ನಾಲ್ಕು ಪ್ರಾಧ್ಯಾಪಕರನ್ನೊಳಗೊಂಡ ತಂಡವು ಪಿಎಂ ಜನ್ಧನ್ ಯೋಜನೆ ಕುರಿತು ಕಳೆದ ಆರು ತಿಂಗಳಿಂದ ಸುದೀರ್ಘ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದೆ.
ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಪರಿಷತ್(ಐಸಿಎಸ್ಎಸ್ಆರ್) ಸಂಸ್ಥೆಯು ಇದಕ್ಕಾಗಿ ಅನುದಾನ ಒದಗಿಸಿತ್ತು ಎನ್ನಲಾಗಿದೆ. ದೇಶದ ಸಮಸ್ತ ನಾಗರಿಕರಿಗೂ ಬ್ಯಾಂಕಿಂಗ್ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಪಿಎಂ ಜನ್ಧನ್ ಯೋಜನೆ ಜಾರಿಗೆ ತರಲಾಯಿತು. ಸಮೀಕ್ಷೆಯ ಪ್ರಕಾರ 52 ಕೋಟಿ ಜನರು ಜನ್ಧನ್ ಖಾತೆಯನ್ನು ಹೊಂದಿದ್ದಾರೆ.
ದೇಶದಲ್ಲಿ ಶೇ.98ರಷ್ಟು ನಾಗರಿಕರು ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಟ್ಟಿದ್ದಾರೆ. ಸರ್ಕಾರದ ಕೆಲ ಸಬ್ಸಿಡಿ, ಬೆಳೆ ನಾಶದ ಪರಿಹಾರ ಸೇರಿದಂತೆ ಹಲವು ಯೋಜನೆಯ ಹಣ ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ತಲುಪಿದೆ ಎಂಬದನ್ನು ವರದಿಯಲ್ಲಿ ತಿಳಿಸಿದೆ. ಹ್ಯಾಕರ್ಗಳು ಜನ್ಧನ್ ಖಾತೆಯಿಂದಲೂ ಹಣ ದೋಚಿರುವ ಬಗ್ಗೆ ವಂಚನೆಗೀಡಾದವರು ಸಮೀಕ್ಷೆ ವೇಳೆ ತಿಳಿಸಿದ್ದಾರೆ. ಇದರ ನಿಯಂತ್ರಣಕ್ಕೆ ತಂತ್ರಜ್ಞಾನ ಬಳಕೆ ಅಗತ್ಯವಿದೆ ಎಂದು ಸಂಶೋಧನಾ ತಂಡವು ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.