ನ್ಯೂಸ್ ನಾಟೌಟ್: ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಕಲಬುರಗಿಯ 3 ಮಂದಿಯೂ ಸೇರಿದಂತೆ 60 ಯುವಕರನ್ನು ಶೀಘ್ರ ಬಿಡುಗಡೆ ಮಾಡುವಂತೆ ವ್ಲಾದಿಮಿರ್ ಪುಟಿನ್ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಈ ಕುರಿತು ರಷ್ಯಾದ ಭಾರತೀಯ ವಿದೇಶಾಂಗ ಇಲಾಖೆ ಕಚೇರಿಯ ಜೊತೆ ಸಂಪರ್ಕದಲ್ಲಿದ್ದು, ರಷ್ಯಾ ಸೇನೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಭಾರತೀಯ ಯುವಕರನ್ನು ರಷ್ಯಾ ಸೇನೆಯಿಂದ ಶೀಘ್ರವಾಗಿ ಮುಕ್ತಿಗೊಳಿಸುವಂತೆ ವಿನಂತಿಸಲಾಗಿದೆ ಎಂದು ತಿಳಿಸಿದ್ದಾರೆ. ರಷ್ಯಾ ಸೇನೆಯಲ್ಲಿ ಕಳೆದ ವರ್ಷ ಸಹಾಯಕರಾಗಿ ಕೆಲಸಕ್ಕೆ ಸೇರಿಕೊಂಡಿದ್ದರು.
ಆದರೆ ರಷ್ಯಾ ಸೇನೆ ಅವರಿಗೆ ವಂಚಿಸಿ ಎಲ್ಲರನ್ನು ರಷ್ಯಾದ ಖಾಸಗಿ ವ್ಯಾಗ್ನರ್ ಸೇನಾಪಡೆಗೆ ಸೇರಿಸುವ ಮೂಲಕ ಉಕ್ರೇನ್ ಜೊತೆಗಿನ ಯುದ್ಧದಲ್ಲಿ ಹೋರಾಡುವಂತೆ ಒತ್ತಾಯ ಮಾಡುತ್ತಿದೆ. ಇದು ಭಾರತೀಯರಲ್ಲಿ ಕಳವಳ ಉಂಟು ಮಾಡಿದ್ದು, ಇವರ ಬಿಡುಗಡೆಗೆ ತೀವ್ರ ಒತ್ತಾಯ ಕೇಳಿಬಂದಿದೆ. ಭಾರತೀಯ ಯುವಕರು ದುಬೈನಲ್ಲಿ ಕೆಲಸ ಮಾಡುತ್ತಿದ್ದಾಗ ಮಹಾರಾಷ್ಟ್ರ ಮೂಲದ ಏಜೆಂಟ್ವೊಬ್ಬರು ರಷ್ಯಾದಲ್ಲಿ ಭಾರೀ ಮೊತ್ತದ ನೌಕರಿಯ ಆಸೆ ಹುಟ್ಟಿಸಿ ಅವರನ್ನು ಭಾರತಕ್ಕೆ ವಾಪಸ್ ಕರೆತಂದಿದ್ದರು.
ಬಳಿಕ ಪ್ರತಿಯೊಬ್ಬರಿಂದ 3.5 ಲಕ್ಷ ರೂ. ಕಮಿಷನ್ ಪಡೆದು ರಷ್ಯಾ ಸೇನೆಯಲ್ಲಿ ಸಹಾಯಕರ ಕೆಲಸಕ್ಕೆ ಸೇರಿಸುವುದಾಗಿ ನಂಬಿಸಿ ವಿಸಿಟರ್ ವೀಸಾದಲ್ಲಿ ಕಳೆದ ಡಿಸೆಂಬರ್ನಲ್ಲಿ ರಷ್ಯಾ ವಿಮಾನ ಹತ್ತಿಸಿದ್ದರು. ಬಳಿಕ ಅಲ್ಲಿ ಅವರಿಂದ ರಷ್ಯಾ ಭಾಷೆಯಲ್ಲಿದ್ದ ಕೆಲವು ಪತ್ರಗಳಿಗೆ ಸಹಿ ಪಡೆದು ಅವರನ್ನು ನೇರವಾಗಿ ವ್ಯಾಗ್ನರ್ ಸಂಸ್ಥೆಗೆ ಸೇರಿಸಿ ಉಕ್ರೇನ್ ಜೊತೆಗೆ ಯುದ್ಧ ಮಾಡುವಂತೆ ಒತ್ತಾಯ ಮಾಡಲಾಗುತ್ತಿದೆ. ವ್ಯಾಗ್ನರ್ ಖಾಸಗಿ ಸೇನೆಯಾಗಿದ್ದು, ಹಣ ನೀಡಿದವರ ಪರವಾಗಿ ಸೇವೆ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಬುಧವಾರ(ಫೆ.21)ದಂದು ಹೈದರಾಬಾದ್ ಮೂಲದ ವ್ಯಕ್ತಿಯ ಕುಟುಂಬ ಸ್ಥಳೀಯ ಸಂಸದರಾದ ಅಸಾದುದ್ದೀನ್ ಓವೈಸಿ ಮೂಲಕ ವಿದೇಶಾಂಗ ಸಚಿವಾಲಯಕ್ಕೆ ಆದಷ್ಟು ಬೇಗ ಎಲ್ಲ ಭಾರತೀಯರನ್ನು ಮರಳಿ ಕರೆತರುವಂತೆ ಮನವಿ ಸಲ್ಲಿಸಿದ್ದಾರೆ.