ನ್ಯೂಸ್ ನಾಟೌಟ್: ಮಸೀದಿಗೆ ಹೋಗಿ ಮಹಿಳೆಯೊಬ್ಬರು ನಮಾಜ್ ಮಾಡಿದ್ದಕ್ಕೆ ಇಡೀ ಕುಟುಂಬಕ್ಕೆ ಕಳೆದ 25 ವರ್ಷದಿಂದ ಗ್ರಾಮದಿಂದ ಬಹಿಷ್ಕಾರ ಮಾಡಿದ್ದಾರೆ ಎನ್ನಲಾಗಿದೆ. ಕೊಡಗಿನ ವಿರಾಜಪೇಟೆ ತಾಲೂಕಿನ ಗುಂಡಿಗೆರೆಯಲ್ಲಿ ಈ ಅಮಾನವೀಯ ಘಟನೆ ವರದಿಯಾಗಿದೆ.
ಕೇರಳದ ಕೋಜಿಕೋಡಿನ ಜುಭೇದಾ 30 ವರ್ಷದ ಹಿಂದೆ ಅಹಮ್ಮದ್ ಎಂಬುವರನ್ನು ವಿವಾಹವಾಗಿದ್ದರು. ಒಮ್ಮೆ ಜುಭೇದಾ ವಿರಾಜಪೇಟೆಯಲ್ಲಿ ಮಸೀದಿಗೆ ಹೋಗಿ ನಮಾಜ್ ಮಾಡಿದ್ದರು. ಇಷ್ಟಕ್ಕೆ ಜುಭೇದಾ ಮತ್ತು ಅಹಮ್ಮದ್ ಕುಟುಂಬಕ್ಕೆ ಗ್ರಾಮದಿಂದಲೇ ಬಹಿಷ್ಕಾರವನ್ನು ಹಾಕಿದ್ದರು. ಜುಭೇದಾ ಕುಟುಂಬಸ್ಥರು ಗ್ರಾಮದಲ್ಲಿ ಯಾರನ್ನು ಮಾತನಾಡಿಸುವಂತಿಲ್ಲ. ಯಾರ ಮನೆಗೂ ಇವರ ಕುಟುಂಬ ಹೋಗುವಂತಿಲ್ಲ.
ಯಾರೂ ಇವರ ಮನೆಗೆ ಬರುವಂತಿಲ್ಲ. ಒಂದು ವೇಳೆ ಯಾರಾದರೂ ಇವರನ್ನು ಮಾತನಾಡಿಸಿದರೆ 5,000 ರೂ. ದಂಡ ಕಟ್ಟಬೇಕು. ಮಾತ್ರವಲ್ಲ ಗ್ರಾಮದಲ್ಲಿರುವ ಅಂಗಡಿಗೆ ಹೋಗಿ ಕನಿಷ್ಠ ಒಂದು ಬೆಂಕಿ ಪೊಟ್ಟಣ ಕೂಡ ತರುವಂತಿಲ್ಲ ಎಂದು ಷರತ್ತು ವಿಧಿಸಲಾಗಿತ್ತು.
ಈ ಕುಟುಂಬ ಕಳೆದ 25 ವರ್ಷಗಳಿಂದ ಈ ಸ್ಥಿತಿಯಲ್ಲಿ ಒದ್ದಾಡಿತ್ತಿದ್ದಾರೆ. ಇದೆಲ್ಲವನ್ನೂ ಸಹಿಸಿಕೊಂಡು ಬಂದಿದ್ದ ಈ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿತ್ತು. ಜುಬೇದಾ ಪತಿ ಅಹಮ್ಮದ್ ಶುಕ್ರವಾರ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು. ಪತಿ ಕಳೆದುಕೊಂಡ ದುಃಖದಲ್ಲಿದ್ದ ಜುಬೇದಾ ಕುಟುಂಬಕ್ಕೆ, ಪತಿ ಅಂತ್ಯಕ್ರಿಯೆಗೆ ಭಾಗವಹಿಸಲು ಗುಂಡಿಗೆರೆ ಶಾಫಿ ಜುಮ್ಮಾ ಮಸೀದಿ ಆಡಳಿತ ಮಂಡಳಿ ಮತ್ತು ಅಧ್ಯಕ್ಷರು ಬಿಟ್ಟಿಲ್ಲ ಎನ್ನಲಾಗಿದೆ.
ತಂದೆಯವರ ದೇಹವನ್ನು ಒತ್ತಾಯ ಪೂರ್ವಕವಾಗಿ ಅಹಮ್ಮದ್ ಅವರ ಹಿರಿಯ ಹೆಂಡತಿ ಮನೆಗೆ ಕೊಂಡೊಯ್ದಿದ್ದಾರೆ. ಹಿರಿ ಹೆಂಡತಿ, ಮಕ್ಕಳಿಂದಲೇ ಅಂತ್ಯಕ್ರಿಯೆ ಮಾಡಿಸಿದ್ದಾರೆ. ಕಿರಿಯ ಹೆಂಡತಿ ಜುಭೇದಾ ಮತ್ತು ಮಕ್ಕಳಿಗೆ ಅವರ ದೇಹವನ್ನು ನೋಡಲೂ ಬಿಡಲಿಲ್ಲ ಎನ್ನಲಾಗಿದೆ.