ನ್ಯೂಸ್ ನಾಟೌಟ್: ಚೀನಾದ ಬೋಟ್ ಒಂದು ಉತ್ತರ ಕನ್ನಡ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಮೀನುಗಾರಿಕೆ ಮಾಡಿಕೊಂಡಿದೆ ಎಂಬ ವಿಚಾರವೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದೀಗ ಆತಂಕಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.
ಭಾರತದ ಆಳ ಸಮುದ್ರ ಪ್ರದೇಶದಲ್ಲಿ ಚೀನಾ ಮೀನುಗಾರಿಕೆ ಬೋಟ್ ಕಂಡಿರುವುದಾಗಿ ವಿಡಿಯೋ ಮಾಡಿಕೊಂಡಿರುವ ಹೊನ್ನಾವರದ ಪರ್ಶಿಯನ್ ಬೋಟ್ ನ ಕಾರ್ಮಿಕ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಕರಾವಳಿ ಕಾವಲು ಪಡೆ ಜಾಗೃತವಾಗಿದ್ದು, ಎಲ್ಲ ಆಯಾಮಗಳಲ್ಲಿ ತನಿಖೆ ಮಾಡುತ್ತಿದೆ. BVKY5 ಎಂಬ ಹೆಸರಿನ ಬೋಟ್ ಒಂದು ಮೀನುಗಾರಿಕೆ ಮಾಡುತ್ತಿದೆ ಎಂಬ ವಿಚಾರವನ್ನು ಹೊನ್ನಾವರದ ಮೀನುಗಾರರೊಬ್ಬರು ಸೋಶಿಯಲ್ ಮೀಡಿಯದಲ್ಲಿ ಹಂಚಿಕೊಂಡಿದ್ದು, ಈ ಬೋಟ್ ಚೀನಾದ್ದೇ ಅಥವಾ ಬೇರಾವುದೇ ದೇಶದ್ದೇ ಅಥವಾ ನಿಜವಾಗಲೂ ಈ ಬೋಟ್ ಇಲ್ಲಿಗೆ ಬಂದಿತ್ತೇ ಎಂಬ ಕುರಿತು ತನಿಖೆಯನ್ನು ಮಾಡಲಾಗುತ್ತಿದೆ. ಕಾರವಾರದಲ್ಲಿ ಸೀಬರ್ಡ್ ನೌಕಾನೆಲೆ ಇದೆ.
ಅಂತಾರಾಷ್ಟ್ರೀಯ ನಿಯಮ ಉಲ್ಲಂಘಿಸಿ ಈ ಬೋಟ್ ಇಲ್ಲಿಗೆ ಬಂದಿತೇ ಎಂಬ ಕುರಿತು ಸಂಶಯವನ್ನು ಇದು ಹುಟ್ಟುಹಾಕಿದೆ. ನೌಕಾದಳ ಕೋಸ್ಟ್ ಗಾರ್ಡ್ ಗಳ ಕಣ್ಣು ತಪ್ಪಿಸಿ ಒಳ ಬಂದಿತೇ ಎಂಬ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಬೋಟ್ ಅನ್ನು ಗೂಢಚರ್ಯೆಗೆ ಬಳಸಾಗುತ್ತಿತ್ತೇ ಎಂಬ ವಿಚಾರದ ಕುರಿತು ಎದ್ದಿರುವ ಅನುಮಾನವೂ ತನಿಖೆಯಿಂದ ಬೆಳಕಿಗೆ ಬರಬೇಕಾಗಿದೆ.
ಜನವರಿ 30ರಂದು ಹೊನ್ನಾವರದಿಂದ ಹೊರಟ ಪರ್ಶಿಯನ್ ಬೋಟ್ ಮೀನುಗಾರಿಕೆಗೆ 200 ನಾಟಿಕಲ್ ಮೈಲು ದೂರ ದಾಟಿ, 500 ನಾಟಿಕಲ್ ಮೈಲು ತಲುಪಿತ್ತು. ಇದೇ ವೇಳೆ ಸಮುದ್ರದಲ್ಲಿ ಫೆ.7ರಂದು ಚೀನಾದ ಅತ್ಯಾಧುನಿಕ ಯಾಂತ್ರಿಕ ಆಳ ಸಮುದ್ರ ಮೀನುಗಾರಿಕೆ ಬೋಟ್ ಮೀನುಗಾರಿಕೆಯಲ್ಲಿ ನಿರತವಾಗಿತ್ತು ಎಂದು ಹೇಳಲಾಗಿದ್ದು, ಅದನ್ನು ವಿಡಿಯೋ ಮಾಡಿಕೊಂಡ ಹೊನ್ನಾವರದ ಮೀನುಗಾರ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಗಿ ಹೇಳಲಾಗಿದೆ.