ನ್ಯೂಸ್ ನಾಟೌಟ್: ಈ ಫ್ಯಾಷನ್ ಯುಗದಲ್ಲಿ ಇ-ಕಾಮರ್ಸ್ ತಾಣಗಳ ಮಧ್ಯೆ ಬಹಳಷ್ಟು ಸ್ಪರ್ಧೆ ಏರ್ಪಟ್ಟಿದೆ. ಈ ನಡುವೆ ಮಧ್ಯಮ ವರ್ಗದ ಮಹಿಳೆಯರ ಫೇವರಿಟ್ ಇ-ಕಾಮರ್ಸ್ ತಾಣವಾಗಿರುವ ಆಗಿರುವ ಮೀಶೋಗೆ ಟಕ್ಕರ್ ಕೊಡಲು ಆಮೆಜಾನ್ ತನ್ನ ಮತ್ತೊಂದು ಇ-ಕಾಮರ್ಸ್ ತಾಣವನ್ನು ಪ್ರಾರಂಭಿಸುತ್ತಿದೆ. ಅದುವೇ ‘ಅಮೆಜಾನ್ ಬಜಾರ್’..!
ಕಡಿಮೆ ಬೆಲೆಯ ಉತ್ಪನ್ನಗಳನ್ನು ಖರೀದಿಸುವ ಜನರನ್ನು ಗುರಿಯಾಗಿಸಿ, ಕಡಿಮೆ ಬೆಲೆಯ, ಬ್ರ್ಯಾಂಡ್ ಹೊರತಾದ ಉಡುಪುಗಳು ಹಾಗೂ ಲೈಫ್ಸ್ಟೈಲ್ ಉತ್ಪನ್ನಗಳಿಗಾಗಿ ಅಮೆಜಾನ್ ಹೊಸ ತಾಣ ‘ಅಮೆಜಾನ್ ಬಜಾರ್’ನ್ನು ಆರಂಭಿಸುತ್ತಿದೆ ಎಂದು ತಿಳಿದು ಬಂದಿದೆ. ಅಮೆಜಾನ್ ಬಜಾರ್ ಪ್ರಸ್ತುತ ಮಾರಾಟಗಾರರನ್ನು ಆನ್ಬೋರ್ಡಿಂಗ್ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ. ಇವರಿಗೆ ಉಡುಪುಗಳು, ಕೈಗಡಿಯಾರಗಳು, ಚಪ್ಪಲಿ, ಆಭರಣಗಳು ಸೇರಿದಂತೆ 600 ರೂ.ಗಿಂತ ಕಡಿಮೆ ಬೆಲೆಯ ಬ್ರ್ಯಾಂಡ್ ಅಲ್ಲದ ಉತ್ಪನ್ನಗಳನ್ನು ಪಟ್ಟಿ ಮಾಡುವಂತೆ ತಿಳಿಸಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಈ ಮೂಲಕ ಕಡಿಮೆ ಬೆಲೆಯ ಉತ್ಪನ್ನಗಳನ್ನು ಖರೀದಿಸುವ ಭಾರತೀಯ ಗ್ರಾಹಕರ ವಿಭಾಗವನ್ನು ಕೈವಶ ಮಾಡಿಕೊಳ್ಳಲು ಅಮೆಜಾನ್ ಹೊರಟಿದೆ. ಈಗಾಗಲೇ ಸಾಮೂಹಿಕ-ಮಾರುಕಟ್ಟೆ ಉತ್ಪನ್ನಗಳಿಗೆ ಬೇಡಿಕೆ ನಿಧಾನವಾಗಿದ್ದು, ಇದೀಗ ಬೇರೆ ದಾರಿಯಲ್ಲಿ ಆದಾಯ ಗಳಿಸಲು ಅಮೆಜಾನ್ ಹೊರಟಿದೆ.