ನ್ಯೂಸ್ ನಾಟೌಟ್: “ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ನಮ್ಮ ಶಾಸಕರಿಗೆ ಕರೆ ಮಾಡಿ ಆಫರ್ ನೀಡುತ್ತಿರುವುದು ಧಮ್ಕಿ ಹಾಕುತ್ತಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ,“ಕುಮಾರಸ್ವಾಮಿ ಯಾರಿಗೆ ಫೋನ್ ಮಾಡಿ, ಏನು ಮಾತನಾಡುತ್ತಿದ್ದಾರೆ, ಯಾರಿಗೆ ಧಮ್ಕಿ ಹಾಕುತ್ತಿದ್ದಾರೆ, ಎಲ್ಲವೂ ನಮಗೆ ತಿಳಿಯುತ್ತಿದೆ.
ಕುಮಾರಸ್ವಾಮಿ ಯಾರಿಗೆ, ಯಾವೆಲ್ಲಾ ಆಫರ್ ಕೊಟ್ಟಿದ್ದಾರೆ ಎಂದು ಶಾಸಕರು ನಮಗೆ ಮಾಹಿತಿ ನೀಡಿದ್ದಾರೆ. ಬಿಜೆಪಿ ತಂತ್ರಗಾರಿಕೆ ಬಗ್ಗೆಯೂ ಗೊತ್ತಿದೆ. ಮೊದಲು ಅವರು ತಮ್ಮ ಮನೆ ಸರಿಪಡಿಸಿಕೊಳ್ಳಲಿ. ಈಗ ಇದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ” ಎಂದಿದ್ದಾರೆ. ವಿರೋಧ ಪಕ್ಷಗಳು ಅಡ್ಡಮತದಾನದ ಪ್ರಯತ್ನ ಮಾಡುತ್ತಿದ್ದಾರಾ ಎಂದು ಕೇಳಿದಾಗ, “ ಸುಮ್ಮನೇ ಐದನೇ ಅಭ್ಯರ್ಥಿ ಕಣಕ್ಕಿಳಿಸುತ್ತಾರಾ? ಒಂದು ಪ್ರಯತ್ನ ಮಾಡೋಣ ಎಂದು ಹಾಕಿದ್ದಾರೆ. ಮತದಾನದ ದಿನ ಎಲ್ಲವೂ ಗೊತ್ತಾಗಲಿದೆ ” ಎಂದು ಹೇಳಿದ್ದಾರೆ.
ವಿರೋಧ ಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತೀರಾ ಎಂದು ಕೇಳಿದಾಗ, “ ನಮಗೆ ಅದರ ಅಗತ್ಯವಿಲ್ಲ. ಜನ ನಮಗೆ 136 ಸೀಟುಗಳನ್ನು ನೀಡಿದ್ದಾರೆ. 2 ಕ್ಷೇತ್ರದ ಪಕ್ಷೇತರರು ನಮ್ಮ ಜತೆಗಿದ್ದಾರೆ. ಬೇರೆಯವರ ಬಗ್ಗೆ ಈಗ ಮಾತನಾಡುವುದಿಲ್ಲ. ಮತದಾನದ ನಂತರ ಮಾತನಾಡುತ್ತೇವೆ” ಎಂದು ಹೇಳಿದ್ದಾರೆ.