ಮಂಗಳೂರು: ವೆಲೆನ್ಸಿಯಾ ಸೇಂಟ್ ಜೆರೋಸಾ ಪ್ರೌಢಶಾಲೆ ಮುಂದೆ ನಿಂತು ಜೈಶ್ರೀರಾಮ್ (Jai Shri Ram) ಘೋಷಣೆ ಕೂಗಿದ್ದಲ್ಲದೇ, ಕ್ರೈಸ್ತ ಧರ್ಮದ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಮೇಲೆ ಶಾಸಕರಾದ ವೇದವ್ಯಾಸ ಕಾಮತ್ (Veda Vyasa Kamath), ಭರತ್ ಶೆಟ್ಟಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಒಂದೆಡೆ ‘ನಗರದ ಸೇಂಟ್ ಜೆರೋಸಾ ಕಾನ್ವೆಂಟ್ನಲ್ಲಿ ಶಿಕ್ಷಕಿಯೊಬ್ಬರು ಹಿಂದೂಧರ್ಮದ ನಿಂದನೆ ಮಾಡಿದ್ದಾರೆ ಎಂಬ ಆರೋಪ ಸುಳ್ಳು. ಆಡಳಿತ ಮಂಡಳಿ ಮೇಲೆ ಶಾಸಕರು ಒತ್ತಡ ಹಾಕಿ ಶಿಕ್ಷಕಿ ವಿರುದ್ಧ ಕ್ರಮಜರುಗಿಸುವಂತೆ ಮಾಡಿದ್ದಾರೆ. ಈ ಪ್ರಕರಣದ ತನಿಖೆ ನಡೆಸಬೇಕು’ ಎಂದು ಮಂಗಳೂರು ಧರ್ಮಪ್ರಾಂತ್ಯ ಒತ್ತಾಯಿಸಿದೆ. ಇದೀಗ ಮಾಜಿ ಶಾಸಕ ಐವಾನ್ ಡಿಸೋಜಾ ನೇತೃತ್ವದ ಕಾಂಗ್ರೆಸ್ (Congress) ನಿಯೋಗವು ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಂಗಳೂರು ನಗರದ ವೆಲೆನ್ಸಿಯಾ ಸೇಂಟ್ ಜೆರೋಸಾ ಪ್ರೌಢಶಾಲೆ ಶಿಕ್ಷಕಿ ಸಿಸ್ಟರ್ ಪ್ರಭಾ ತಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡುವ ವೇಳೆ ಹಿಂದೂ ದೇವರನ್ನು ಅವಮಾನ ಮಾಡಿರುತ್ತಾರೆ ಎನ್ನಲಾದ ವೀಡಿಯೋ ವೈರಲ್ ಆಗಿದೆ. ಆದ್ರೆ ಪ್ರಭಾ ಅವರು ಯಾವುದೇ ಧರ್ಮಕ್ಕೆ ಅವಮಾನವಾಗುವ ರೀತಿಯಲ್ಲಿ ನಡೆದುಕೊಂಡಿಲ್ಲ. ಈ ಬಗ್ಗೆ ಸ್ಥಳೀಯ ಶಾಲಾ ಆಡಳಿತ ಮಂಡಳಿ ಜೊತೆ ವಿಮರ್ಷೆ ಮಾಡದೇ ಶಾಸಕ ವೇದವ್ಯಾಸ ಕಾಮತ್ ಇದೇ ಫೆಬ್ರವರಿ 12 ರಂದು ಶಾಲೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದೆ.