ನ್ಯೂಸ್ ನಾಟೌಟ್ : ಪ್ರೇಮಿಗಳ ದಿನದಂದೇ ರಾಕ್ ಲೈನ್ ಅವರಿಗೆ ಇಂದು ಬೆಳ್ಳಂಬೆಳಗ್ಗೆ ಶಾಕಿಂಗ್ ನ್ಯೂಸ್.. ತೆರಿಗೆ ಬಾಕಿ ಉಳಿಸಿಕೊಂಡಿರುವ ಕಾರಣಕ್ಕೆ ರಾಕ್ಲೈನ್ ವೆಂಕಟೇಶ್ ಒಡೆತನದ ಲಾಕ್ಲೈನ್ ಮಾಲ್ಗೆ ಬೀಗ ಬಿದ್ದಿದೆ. ಇಂದು(ಫೆಬ್ರವರಿ 14) ಮುಂಜಾನೆಯೇ ಬಿಬಿಎಂಪಿ ಅಧಿಕಾರಿಗಳಿಂದ ದಾಳಿ ನಡೆಸಿ ತೆರಿಗೆ ಪಾವತಿ ಮಾಡದ ಹಿನ್ನೆಲೆ ಮಾಲ್ ಸೀಜ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಬಿಬಿಎಂಪಿ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್, ವಲಯ ಜಂಟಿ ಆಯುಕ್ತ ಬಾಲಶೇಖರ್ ಸಮ್ಮಖದಲ್ಲಿ ಅಧಿಕಾರಿಗಳು ರೇಡ್ ನಡೆಸಿದ್ದಾರೆ. 2011 ರಿಂದ 2022-23 ರವರೆಗೆ ಮಾಲ್ ಆಡಳಿತ ಮಂಡಳಿ ತೆರಿಗೆ ಬಾಕಿ ಉಳಿಸಿಕೊಂಡಿದೆ. 11.51 ಕೋಟಿ ರೂ. ಆಸ್ತಿ ತೆರಿಗೆಯನ್ನು ಪಾಲಿಕೆಗೆ ಪಾವತಿಸಬೇಕಿದೆ. ತೆರಿಗೆ ಪಾವತಿ ಮಾಡುವಂತೆ ಡಿಮಾಂಡ್ ನೋಟೀಸ್ ನೀಡಿದ್ದರೂ ತೆರಿಗೆ ಪಾವತಿಸದ ಕಾರಣ ಕ್ರಮ ಕೈಗೊಳ್ಳಲಾಗಿದೆ.ದಾಸರಹಳ್ಳಿ ಜಂಟಿ ಆಯುಕ್ತ ಬಾಲಶೇಖರ್ ಮಾತನಾಡಿ “ಅರ್ಧ ತೆರಿಗೆಯಾದ್ರೂ ಮಾಲ್ ಆಡಳಿತ ಮಂಡಳಿ ಪಾವತಿಸಬೇಕು. ಅಲ್ಲಿಯವರೆಗೂ ಮಾಲ್ ತೆರೆಯುವಂತಿಲ್ಲ. ಈ ಹಿಂದೆ ಈ ಕೇಸ್ ಕೋರ್ಟ್ನಲ್ಲಿತ್ತು. ಒಂದು ವರ್ಷದ ಹಿಂದೆ ಕೇಸ್ ಇತ್ಯರ್ಥವಾಗಿದೆ. ಆದರೂ ಸಹ ಇನ್ನು ತೆರಿಗೆ ಪಾವತಿ ಮಾಡಿಲ್ಲ. ಇದೇ ಕಾರಣಕ್ಕೆ ಇವತ್ತು ನಾವು ಮಾಲ್ಗೆ ಬೀಗ ಹಾಕಿದ್ದೇವೆ. ಬೀಗ ಹಾಕಲು ಅನೇಕರು ವಿರೋಧ ಮಾಡಿದ್ರು. ಆದರೂ ನಮ್ಮ ಕರ್ತವ್ಯ ನಾವು ನಿರ್ವಹಿಸಿದ್ದೇವೆ” ಎಂದಿದ್ದಾರೆ.
ಇನ್ನು ರಾಕ್ಲೈನ್ ಮಾಲ್ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿರುವ ಬಗ್ಗೆ ಮಾಲ್ ಮ್ಯಾನೇಜರ್ ಪ್ರಕಾಶ್ ಪ್ರತಿಕ್ರಿಯಿಸಿದ್ದಾರೆ. “ನಮಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ನಿನ್ನೆ ರಾತ್ರಿ ನೋಟಿಸ್ ಕೊಡಲು ಬಂದ್ರು. ನಾವು ರಾಕ್ಲೈನ್ ಸರ್ ಬರ್ತಾರೆ ಇರಿ. ಅವರೇ ನೋಟಿಸ್ ಕಾಪಿ ತೆಗೆದುಕೊಳ್ತಾರೆ ಎಂದು ಹೇಳಿದ್ದೆವು. ಆದರೂ ಕಾಯಲಿಲ್ಲ, ಇವತ್ತು ಬೆಳಗ್ಗೆ ಬಂದು ಮಾಲ್ಗೆ ಏಕಾಏಕಿ ಬೀಗ ಹಾಕಿದ್ದಾರೆ. ನಮಗೆ ಕೋರ್ಟ್ನಿಂದ ಹಣ ಡಿಪಾಸಿಟ್ ಮಾಡಲು ಹೇಳಿದ್ರು ಮಾಡಿದ್ದೇವೆ” ಎಂದು ತಿಳಿಸಿದ್ದಾರೆ.