ನ್ಯೂಸ್ ನಾಟೌಟ್: ಕೆಲವೊಂದ್ಸಲ ನಾವು ಸಿಹಿಯಾಗಿರೋದನ್ನು ಪಡಿಬೇಕಾದರೆ ಕಹಿಯಾದ ಸಂದರ್ಭವನ್ನು ಅನುಭವಿಸಬೇಕಾಗುತ್ತದೆ.ಇದು ಅನಿವಾರ್ಯ ಕೂಡ.ಮನುಷ್ಯ ಕುಳಿತಲ್ಲೇ ಇದ್ದರೆ ಆತ ತನಗಿಷ್ಟವಾಗಿರೋದನ್ನು ಪಡೆಯೋದಕ್ಕೆ ಸಾಧ್ಯವಿದೆಯೇ? ಆತ ನಿರಂತರ ಹರಿಯುವ ನೀರಿನಂತೆ ಕ್ರೀಯಾಶೀಲನಾಗಿರಬೇಕು,ಒಂದಷ್ಟು ಕಷ್ಟಗಳ ಸರಮಾಲೆಯನ್ನು ದಾಟಿದ ಬಳಿಕವೇ ಯಶಸ್ಸು ಅನ್ನೋದು ಬೆನ್ನಟ್ಟಿ ಬರುತ್ತೆ ಅಲ್ವ?
ಈ ಮಾತನ್ನು ಯಾಕೆ ಹೇಳ್ತಾ ಇದ್ದೀವಿ ಅಂದ್ರೆ, ಇಲ್ಲೊಬ್ಬರು ವ್ಯಕ್ತಿಯಿದ್ದಾರೆ.ಇವರಿಗೆ ಜೇಣು ನೊಣಗಳೆಂದ್ರೆ ಕುಟುಂಬ ಸದಸ್ಯರಿದ್ದ ಹಾಗೆ..ಮಾತ್ರವಲ್ಲ ಈ ವ್ಯಕ್ತಿ ಜೇನುನೊಣಗಳನ್ನು ಮುಖದ ಮೇಲೆ ಗಡ್ಡದಂತೆ ಕುಳ್ಳಿರುಸುತ್ತಾರೆ..!ಅರೆ..! ಆಶ್ಚರ್ಯ ಪಡಬೇಡಿ.. ಸಾಮಾನ್ಯವಾಗಿ ಬಹುತೇಕ ಮಂದಿ ಜೇನು ಅಂದ್ರೆ ಭಯ ಪಡ್ತಾರೆ.ಆದರೆ ಇವರಿಗೆ ಜೇನುನೊಣ ಎಂದರೆ ತುಂಬಾ ಪ್ರೀತಿ. ಅವುಗಳು ಕೂಡ ಇವರ ಬಳಿ ಬಂದು ಅಷ್ಟೇ ಮುದ್ದಿನಿಂದ ಮುಖದ ಮೇಲೆಲ್ಲಾ ಹಾರಾಡುತ್ತವೆ. ಮಾತ್ರವಲ್ಲ ಗಡ್ಡದಂತೆ ಗೂಡನ್ನೇ ಕಟ್ಟುತ್ತವೆ.ಹೀಗೆ ಜೇನು ನೊಣಗಳ ರಿಯಲ್ ಪ್ರೀತಿಗೆ ಪಾತ್ರರಾದ ಇವರ ಹೆಸರೇ ಕುಮಾರ ಪೆರ್ನಾಜೆ.ಪುತ್ತೂರು ತಾಲೂಕಿನ ಮುಡ್ನೂರು ಪೆರ್ನಾಜೆ ಎಂಬಲ್ಲಿ ಇವರ ಮನೆ.ಆದರೆ ಇವರ ಮನೆ ತುಂಬೆಲ್ಲಾ ಜೇನು ಗೂಡುಗಳದ್ದೇ ಕಾರುಬಾರು.ಈ ವೈಭವವನ್ನು ನೋಡೋದಕ್ಕೆ ಎರಡು ಕಣ್ಣುಗಳೇ ಸಾಲದು ಎಂಬಂತಿದೆ ಅವರಿರುವ ಸುತ್ತಲ ಪರಿಸರ!
ನೀವು ಎಲ್ಲೋ ಹೊರ ರಾಜ್ಯಗಳಲ್ಲಿ ಇಂತಹ ವ್ಯಕ್ತಿಗಳನ್ನು ವಿಡಿಯೋ ಮೂಲಕ ನೋಡಿರುತ್ತೀರಿ. ಆದರೆ ಇವರು ನಮ್ಮ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯವರು ಅನ್ನೋದು ನಮಗೆ ಹೆಮ್ಮೆ.ಅನೇಕ ಕಡೆ ಜೇನು ಗಡ್ಡ, ಜೇನಿನ ಬಗ್ಗೆ ಸ್ಲೈಡ್ ಶೋ ಮುಖಾಂತರ ಕಾರ್ಯಗಾರಗಳನ್ನು ನೀಡಿ ಎಲ್ಲರಿಗೂ ಆದರ್ಶರಾಗಿದ್ದಾರೆ.ಇವರಿಗೆ ಜೇನು ನೊಣದ ಬಗ್ಗೆ ಸಂಪೂರ್ಣ ಮಾಹಿತಿಯಿದೆ.ಹೆಚ್ಚಿನವರು ಜೇನು ನೊಣ ಗೂಡನ್ನು ಕಂಡಾಗ ಭಯದಿಂದಲೋ, ಜೇನು ತುಪ್ಪದ ಆಸೆಯಿಂದಲೋ ಅದರ ಗೂಡಿಗೆ ಬೆಂಕಿಯಿಡುತ್ತಾರೆ.ಆದರೆ ಈ ಬಗ್ಗೆ ಜಾಗೃತಿ ಮೂಡಿಸಲು ಮುಂದಾದ ಕುಮಾರ ಪೆರ್ನಾಜೆ ಅವರು ಅವುಗಳೂ ಒಂದು ಜೀವಿ.ಈ ಸುಂದರ ಪರಿಸರದಲ್ಲಿ ಅವುಗಳಿಗೂ ವಾಸಿಸುವ ಹಕ್ಕಿದೆ.ಹೀಗಾಗಿ ಅವುಗಳನ್ನು ಸ್ನೇಹದಿಂದ ಕಂಡಾಗ ಕ್ರಮೇಣ ನಮ್ಮನ್ನು ಪ್ರೀತಿಸಲಾರಂಭಿಸುತ್ತವೆ ಎನ್ನುತ್ತಾರೆ ಪೆರ್ನಾಜೆಯವರು.ಇವರ ಜೇನು ಕೃಷಿಗೆ ಪತ್ನಿ ಸೌಮ್ಯ ಪೆರ್ನಾಜೆ ಇವರಿಗೆ ಸಾಥ್ ಕೊಡುತ್ತಿದ್ದು, ಮಕ್ಕಳಾದ ನಂದನ್ ಕುಮಾರ್, ಚಂದನ್ ಕುಮಾರ್ ಕೂಡ ಜೇನು ನೊಣಗಳ ಸುಂದರ ಪ್ರಪಂಚದಲ್ಲಿಯೇ ಒಂದೊಳ್ಳೆಯ ಅನುಭವವನ್ನು ಪಡಿತಿದ್ದಾರೆ.ಒಟ್ಟಿನಲ್ಲಿ ಇವರ ಸಂಸಾರ ಕೂಡ ಜೇನು ಗೂಡಂತೆ ಎಂದರೆ ತಪ್ಪಲ್ಲ..!
ಆಧುನಿಕ ಬದುಕಿನ ಜಂಜಾಟದಲ್ಲಿ ಮನಸ್ಸಿನ ನೆಮ್ಮದಿಗಾಗಿ ಎಲ್ಲೂ ಹೋಗಬೇಕಾಗಿಲ್ಲ..ಹತ್ತು ನಿಮಿಷ ಜೇನು ಗೂಡು ಬಳಿ ಬಂದು ಸಮಯ ಕಳೆದರೆ ಇನ್ನೆಲ್ಲೂ ಸಿಗದ ನೆಮ್ಮದಿ ಇಲ್ಲಿ ಸಿಗುತ್ತೆ ಅನ್ನೋದು ಈ ಪ್ರಗತಿಪರ ಕೃಷಿಕನ ಅಭಿಪ್ರಾಯ.ಇವರು ಕೇವಲ ಪ್ರಗತಿ ಪರ ಕೃಷಿಕರು ಮಾತ್ರವಲ್ಲ, ಪತ್ರಕರ್ತರು, ಬರಹಗಾರರು,ಲೇಖಕರು,ಸಂಶೋಧಕರು ಹಾಗೂ ಜೇನು ಕೃಷಿ ತಜ್ಞರು ಕೂಡ..!ಅದರಲ್ಲೂ ವಿಶೇಷವಾಗಿ ಜೇನು ಕೃಷಿಯಲ್ಲಿ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ರಾಣಿ ಜೇನನ್ನು ಗಲ್ಲದಲ್ಲಿ ಬಿಟ್ಟು ಚಮತ್ಕಾರವನ್ನೇ ಮಾಡುತ್ತಾರೆ.ರಾಣಿ ಜೇನು ಇವರ ಗಲ್ಲದ ಬಳಿ ಬಂದಾಗ ಒಮ್ಮಿಂದೊಮ್ಮೆಲೆ ಇತರೆ ಜೇನು ನೊಣಗಳು ಹಾರಿ ಬಂದು ಇವರ ಮುಖ ತುಂಬೆಲ್ಲಾ ಆವರಿಸಿ ಬಂದು ಕುಳಿತುಕೊಳ್ಳುತ್ತವೆ.ಶಾಲಾ ಮಕ್ಕಳಿಗೆ, ರೋಟರಿಕ್ಲಬ್, ಕಾಲೇಜ್ ಮಕ್ಕಳಿಗೆ ಸೇರಿದಂತೆ ಹತ್ತು ಹಲವು ಕಡೆಗಳಲ್ಲಿ ಈ ರೀತಿಯ ಪ್ರದರ್ಶನ ನೀಡುತ್ತಾ ಹಲವರ ಅಚ್ಚರಿಗೂ ಪಾತ್ರರಾಗಿದ್ದಾರೆ.
ಇವರ ಈ ಸಾಧನೆಗೆ ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ. ರಾಷ್ಟ್ರೀಯ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿ, ಆವಿಷ್ಕಾರಿ ರೈತ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಜಿಲ್ಲಾ ತಾಲೂಕು ಸನ್ಮಾನಗಳನ್ನು ಪಡೆದಿದ್ದು ಗ್ರಾಮೀಣ ಕಲಾ ಪ್ರತಿಭೆಗಳನ್ನು ಒಂದುಗೂಡಿಸಿ ಸ್ವರ ಸಿಂಚನ ಕಲಾತಂಡದಿಂದ ಹಲವಾರು ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ಮಾಡಿರುವ ಹೆಮ್ಮೆ ಕೂಡ ಇವರದಾಗಿದೆ. ಸಾಧನೆ ಮಾಡಿದಾಗ ಹೆಜ್ಜೆಗುರುತು ಮೂಡಿಸಬೇಕು ಎನ್ನುವ ಇವರಿಗೆ ಹೊಸ ಹೊಸ ಸಂಶೋಧನೆ ಇವರ ಹವ್ಯಾಸ ಕೂಡ.ಸದ್ಯ ಇದೀಗ ಹನಿ ಪಾರ್ಕ್ (ಜೇನಿನ ಕನಸಿನ ಮನೆ) ಮಾಡುವತ್ತ ಒಲವು ತೋರಿದ್ದಾರೆ.
ಸದ್ಯ ಇವರು ಕೋತಿ ಕೋವಿ, ಬೋರ್ಡೋ ದ್ರಾವಣ ಸ್ಪ್ರೈನ್ ಟೆಕ್ನಿಕ್, ಸಿಮೆಂಟ್ ಶೀಟ್ ನಲ್ಲಿ ಜೇನುಪೆಟ್ಟಿಗೆ, ಕೃಷಿವಲಯದಲ್ಲಿ ಹೊಸ ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ವಿಶಿಷ್ಟ ಮತ್ತು ಗಮನಾರ್ಹ ಸಾಧನೆ ಮಾಡಿದ್ದಾರೆ. ಅದರಲ್ಲೂ ಕೃಷಿಯ ಮಹತ್ಕಾರ್ಯವನ್ನು ಸಾಧಿಸಿ ಜೇನು ಗಡ್ಡ ಕಲೆಯ ಅನನ್ಯ ಸಾಧಕರಾಗಿದ್ದಾರೆ.ನಿಜವಾಗಿಯೂ ಮನಸಿದ್ದು ಕೆಲಸ ಮಾಡುವವರಿಗೆ ಅವಕಾಶ ಮತ್ತು ದಾರಿಯಷ್ಟೆ ಕಾಣಿಸುತ್ತೆ. ಸಾಧನೆಗೆ ಸಾಧಿಸುವ ಗುರಿ ಮುಖ್ಯ.ಜೇನುತುಪ್ಪದಂತ ಸಿಹಿ ಪಡಿಬೇಕಿದ್ದರೆ ಜೇನುನೊಣಗಳಂತೆ ಒಟ್ಟಿಗೆ ಇರೋದನ್ನು ಕಲಿಬೇಕು, ಯೋಗ್ಯನಿಗೆ ಏನೇ ಸಿಕ್ಕರೂ ಅದು ಯೋಗ್ಯತೆಯನ್ನೇ ಪಡೆಯುತ್ತದೆ ಅನ್ನೋದಕ್ಕೆ ಕುಮಾರ ಪೆರ್ನಾಜೆಯವರೇ ಉತ್ತಮ ನಿದರ್ಶನ.