ನ್ಯೂಸ್ ನಾಟೌಟ್: ಮತಹಾಕಿದ ಜನರನ್ನು ಜನಪ್ರತಿನಿಧಿಗಳು ಮರೆತಾಗ ಜನರು ತಾಳ್ಮೆ ಕಳೆದುಕೊಂಡು ರೊಚ್ಚಿಗೇಳುತ್ತಾರೆ ಅನ್ನುವುದನ್ನು ನೆನಪಿಸುವಂತಹ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡಿನ ಅಂಗಡಿಮಜಲು ಎಂಬಲ್ಲಿ ನಡೆದಿದೆ.
ಕಳೆದ 20 ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿರುವ ಅರಂತೋಡಿನ ಅಂಗಡಿ ಮಜಲು ರಸ್ತೆ ಹದಗೆಟ್ಟಿದೆ. ಇಲ್ಲಿಗೆ ಎರಡು ದಶಕದ ಹಿಂದೆ ಡಾಂಬರೀಕರಣ ನಡೆದಿತ್ತು. ಆ ಬಳಿಕ ಡಾಂಬರೀಕರಣ ಎಂಬುದೇ ನಡೆದಿರಲಿಲ್ಲ. ಇದೀಗ ರಸ್ತೆ ಮಡ್ ರೋಡ್ ಆಗಿ ಪರಿವರ್ತನೆಯಾಗಿದೆ. ಜನರಿಗೆ ನಿತ್ಯ ಸಂಚಾರ ಮಾಡುವುದಕ್ಕೆ ಕಷ್ಟವಾಗಿದೆ.ಇನ್ನು ವಿದ್ಯಾರ್ಥಿಗಳ ಪಾಡಂತು ಹೇಳತೀರದಾಗಿದೆ.ರಸ್ತೆಯೆಲ್ಲಾ ಧೂಳುಮಯವಾಗಿದ್ದು,ಒಂದು ಬೈಕ್ ಸಂಚರಿಸಿದರೂ ಕೂಡ ರೋಡ್ ತುಂಬೆಲ್ಲಾ ಧೂಳಿನಿಂದ ಕೂಡಿರುತ್ತದೆ.ಹೀಗಾಗಿ ಪ್ರತಿನಿತ್ಯವೂ ರೋಡ್ಗೆ ನೀರು ಹಾಕುವ ಪರಿಸ್ಥಿತಿ ಬಂದೊದಗಿದೆ.ಕೆಸರು ತುಂಬಿದ ರಸ್ತೆಯಲ್ಲಿ ಸಮವಸ್ತ್ರ ಧರಿಸಿಕೊಂಡು ವಿದ್ಯಾರ್ಥಿಗಳು ನಡೆದಾಡುವುದೇ ಕಷ್ಟ ಸಾಧ್ಯವಾಗಿದೆ. ಈ ರಸ್ತೆಯನ್ನು ಸರಿಪಡಿಸಿಕೊಡುವಂತೆ ಹಲವು ಸಲ ಮನವಿ ಸಲ್ಲಿಸಿದರೂ ಜನಪ್ರತಿನಿಧಿಗಳು ಕ್ಯಾರೆ ಅಂದಿಲ್ಲ.ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಇದೀಗ ಮತದಾನ ಬಹಿಷ್ಕಾರದ ಬ್ಯಾನರ್ ವೊಂದನ್ನು ಆ ರಸ್ತೆಯಲ್ಲಿ ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಹಲವು ವರ್ಷಗಳಿಂದ ಅರಂತೋಡು ಅಂಗಡಿಮಜಲು ರಸ್ತೆಯನ್ನು ಅಭಿವೃದ್ಧಿಪಡಿಸದ ಕಾರಣ ಅಂಗಡಿಮಜಲು , ಪಾರೆಮಜಲು ಮಂಟಮೆಗುಡ್ಡೆ ನಾಗರಿಕರಿಂದ ಮತದಾನ ಬಹಿಷ್ಕಾರ ಎಂದು ಬ್ಯಾನರ್ ನಲ್ಲಿ ಬರೆದಿದೆ. ಮುಂಬರುವ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಆ ಭಾಗದ ಜನರಿಂದ ನುಂಗಲಾರದ ಬಿಸಿ ತುಪ್ಪವಾಗುವುದಂತೂ ನಿಜ.