🖊️ – ದಯಾಮಣಿ ಹೇಮಂತ್
ನ್ಯೂಸ್ ನಾಟೌಟ್: ನಾವೆಲ್ಲ ಬಾಲ್ಯದಲ್ಲಿದ್ದಾಗ ಅಮ್ಮ ವರ್ಷಕ್ಕೊಂದು ಬಾರಿ ಮನೆ ಅಂಗಳದ ತುಳಸಿಕಟ್ಟೆ ಹತ್ರ ಹೋಗಿ ಸೆಗಣಿ ತಕೊಂಡು ಗುಡಿಸುತ್ತಿದ್ದಳು..!ಮಾವಿನ ಎಲೆ, ಹಲಸಿನ ಎಲೆ ,ಎಣ್ಣೆ, ಅರಶಿನ, ಸ್ನಾನದ ನೀರಿಗೆ ಹಾಕಲು ಸೀಗೆ, ಹೀಗೆ ಎಲ್ಲವನ್ನೂ ಸಾಲಾಗಿ ಜೋಡಿಸಿ ಇಟ್ಟು ಪ್ರಾರ್ಥಿಸುತ್ತಿದ್ದಳು.ಅದೇ ಅಂಗಳದಲ್ಲಿ ನಿಂತುಕೊಂಡು ದೂರದಿಂದ ಇದೆಲ್ಲವನ್ನು ಗಮನಿಸಿ ಅಮ್ಮನ ಬಳಿ ಬಂದು “ಅಮ್ಮ.. ಇದೆಲ್ಲ ಯಾಕೆ ಮಾಡ್ತಿದ್ದಿಯಾ?ಅಂಗಳಕ್ಕೆ ಅಪರೂಪಕ್ಕೆ ಒಂದೊಂದ್ಸಲ ಸೆಗಣಿ ಸಾರೋದನ್ನ ನೋಡಿದ್ದೀನಿ.. ಆದರೆ ಮಾವಿನ ಎಲೆ,ಹಲಸಿನ ಎಲೆ ಯಾಕೆ?” ಎಂದು ಕೇಳಿದಾಗ ‘ಇನಿ ಕೆಡ್ಡಸ ಮಗ ..ತುಳುವಪ್ಪೆ ಆಯಿನಂಚಿನ ಭೂಮಿದೇವಿ ಮದ್ಮಾಲ್ ಆತಲ್ ಅವೆಕ್ ಆಲ್ ಇತ್ತೆ ಮಿಯರೇ ಪೋವೋಡು..’ಹೀಗೆ ಉತ್ತರಿಸಿ ಸ್ನಾನಕ್ಕೆ ಹೋಗೋ ಹೊತ್ತಿಗೆ ಇದೆಲ್ಲವನ್ನ ನಾವು ಕೊಡಬೇಕು ಎನ್ನುತ್ತಿದ್ದಳು..
ಆತ್ಮಿಯರೇ, ಕೆಡ್ಡಸ ಅಂದ್ರೆ ತುಳುನಾಡಿನಲ್ಲಿ ಆಚರಿಸುವ ವಿಶೇಷ ಆಚರಣೆಗಳಲ್ಲಿ ಒಂದು.ಆ ದಿನದಂದು ತುಳುನಾಡಿನಲ್ಲಿ ಏನೋ ಸಂಭ್ರಮ , ಸಡಗರ.. ಮಾತ್ರವಲ್ಲ ಮನೆಯಲ್ಲೂ ಭರ್ಜರಿ ಊಟವೂ ಕೂಡ.ಆದರೆ ಗದ್ದೆ,ಉಳುಮೆ ಇದ್ದಾಗ ಈ ಆಚರಣೆ ಇನ್ನು ವೈಭವದಿಂದ ಕೂಡಿರುತ್ತಿತ್ತು ಅಲ್ವ?.ಒಂದೊಂದ್ಸಲ ಈ ಆಚರಣೆಗಳನ್ನೆಲ್ಲ ಆಚರಿಸಿ ಆ ಸಂಭ್ರಮವನ್ನು ನೋಡಿ ಬೆಳೆದ ನಮಗೆ ನಾವು ಅದೆಷ್ಟೋ ಧನ್ಯರು ಅನ್ನೋ ಭಾವನೆಯೂ ಮೂಡುತ್ತೆ..ಸುಮಾರು ೧೦-೨೦ ವರ್ಷಗಳ ಹಿಂದಿನ ಆ ಪರಿಸರದ ಚಿತ್ರಣವೇ ಬೇರೆ..ಸ್ವಚ್ಚ ಮನಸ್ಸು,ಸ್ವಚ್ಚ ಪರಿಸರದ ಮಧ್ಯೆ ಯಾವುದೇ ಅಂಜಿಕೆಯಿಲ್ಲದೇ ಸ್ವತಂತ್ರ ಹಕ್ಕಿಗಳಂತೆ ಕಾಲ ಕಳೆದಿದ್ವಿ..!ಈ ಸಿಹಿ ನೆನಪುಗಳು ನಿಮಗೂ ಕೂಡ ಇನ್ನೂ ಹಸಿರಾಗಿಯೇ ಇದ್ದಿರಬಹುದಲ್ವ?..
ಆ ಸಮಯದಲ್ಲಿ ಕೆಡ್ಡಸವೆಂದರೆ ಇನ್ನೂ ಹಲವು ವಿಶೇಷತೆಗಳಿಂದಲೇ ಕೂಡಿರುತ್ತಿತ್ತು.ಇವಾಗಿನ ವಾಹನಗಳ ಆರ್ಭಟ,ಮೊಬೈಲ್,ಕಂಪ್ಯೂಟರ್,ವಿದ್ಯುತ್, ತಂತ್ರಜ್ಞಾನಗಳ ಅಬ್ಬರ ಅದ್ಯಾವುದೂ ಇರಲಿಲ್ಲ.ಚಿಮಿಣಿ ದೀಪದಡಿಯಲ್ಲಿ ಓದು,ಮಣ್ಣಿನ ರಸ್ತೆಯಲ್ಲೇ ಓಡಾಟ..ಇಂತಹ ಸಮಯದಲ್ಲಿ ಹಬ್ಬ ಬಂತೆಂದರೆ ತರಹೇವಾರಿ ರುಚಿ ರುಚಿಯಾದ ಖಾದ್ಯಗಳನ್ನು ತಿನ್ನಬಹುದೆನ್ನುವ ಖುಷಿ..ಹೀಗೆ ತುಳುನಾಡಿನ ಒಂದೊಂದು ಹಬ್ಬಗಳು ಕೂಡ ವಿಶೇಷ ಅನುಭವವನ್ನೇ ನೀಡುತ್ತಿತ್ತು.ನಮ್ಮ ಪೂರ್ವಿಕರು ತುಂಬಾ ಮುಗ್ಧ ಮನಸ್ಸಿನವರು.ಅನೇಕ ವರ್ಷಗಳ ಹಿಂದಿನಿಂದಲೂ ಅನ್ನ ನೀಡುವ ಭೂಮಿಯನ್ನೇ ಹೆಣ್ಣೆಂದೇ ಪರಿಗಣಿಸಿ ಆರಾಧನೆ ಮಾಡಿಕೊಂಡು ಬಂದವರು.ಅವರ ಎಲ್ಲಾ ಆಚರಣೆಗಳಲ್ಲೂ ಪ್ರಕೃತಿ ಪ್ರೇಮ, ಮಾನವೀಯ ಸಂಬಂಧಗಳು ಎದ್ದುಕಾಣುತ್ತಿತ್ತು ಅನ್ನೋದು ನಿಮಗೆ ತಿಳಿದಿರುವ ವಿಚಾರವೇ..ಪ್ರಕೃತಿ ಹೆಣ್ಣಾಗಿರುವುದರಿಂದ ಆಕೆ ವರ್ಷಕ್ಕೊಮ್ಮೆ ಋತುಮತಿಯಾಗುತ್ತಾಳೆ ಅನ್ನೋ ನಂಬಿಕೆ ಕೂಡ ಬಲವಾಗಿತ್ತು. ಆ ದಿನವನ್ನೇ ಹಿರಿಯರು ‘ಕೆಡ್ಡಸ’ ಎಂದು ಕರೆದರು.
ಇದೊಂದು ಜನಪದ ಗ್ರಹಿಕೆಯಾಗಿದ್ದರೂ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಿಶೇಷವಾಗಿ ತುಳುವರಿಗೆ ಇದೊಂದು ವಿಶಿಷ್ಟ ಪರ್ವದಿನವೂ ಹೌದು. ಸಾಮಾನ್ಯವಾಗಿ ತುಳುನಾಡಿನಲ್ಲಿ ಹೆಣ್ಣು ಋತುಮತಿಯಾದಾಗ ಕುಡಿಯಲು ಎಳನೀರು, ಪ್ರೀತಿಪಾತ್ರರಿಂದ ಸಿಹಿತಿಂಡಿ ನೀಡಿ ಬಾಯಿ ಸಿಹಿಮಾಡಿಸುತ್ತಾರೆ. ಅರಶಿನ, ಕುಂಕುಮ , ತಲೆಗೆ ತೆಂಗಿನ ಎಣ್ಣೆ , ಸ್ನಾನದ ನೀರಿಗೆ ಹಲಸಿನ ಎಲೆ, ಮಾವಿನ ಎಲೆ ಹಾಕಲಾಗುತ್ತೆ.. ಹೊಸ ಬಳೆ , ಹೊಸ ಬಟ್ಟೆಯೊಂದಿಗೆ ಆಕೆಯನ್ನು ಶೃಂಗಾರ ಮಾಡಿ ಮನೆಮಂದಿಯೆಲ್ಲ ಸಂತಸ ಪಡುತ್ತಾರೆ. ಮನೆ ಹುಡುಗಿ ದೊಡ್ಡವಳಾದಳು ಎಂದರೆ ಗರ್ಭಾವಸ್ಥೆಗೆ ಅಣಿಯಾದಳು ಎಂಬರ್ಥ.ಅದೇ ಖುಷಿಯನ್ನು ಪ್ರಕೃತಿಯಾದ ಭೂಮಾತೆಯಲ್ಲೂ ನೋಡುವಂತಹ ತುಳುವರ ವಿಶೇಷ ಆಚರಣೆಯೇ ಈ ‘ಕೆಡ್ಡಸ’.
ಕೆಡ್ಡಸ ತುಳು ತಿಂಗಳ ಪೊನ್ನಿ(ಮಕರ) 27 ಕ್ಕೆ ಅಂದರೆ ಸಾಮಾನ್ಯವಾಗಿ ಫೆಬ್ರವರಿ ತಿಂಗಳಲ್ಲಿ ಆಚರಿಸುತ್ತಾರೆ. ಮೂರು ದಿನದ ಈ ಆಚರಣೆಯಲ್ಲಿ ಮೊದಲ ದಿನ ಮೊದಲ ಕೆಡ್ಡಸ, ಮರುದಿನ ನಡು ಕೆಡ್ಡಸ, ಮೂರನೆ ದಿನ ಕಡೆ ಕೆಡ್ಡಸ.. ಈ ಸಮಯಕ್ಕೆ ಫಲ ಗಾಳಿ ಬೀಸುತ್ತಿದ್ದು, ಮಾವು, ಗೇರು, ಹಲಸುಗಳೆಲ್ಲ ಫಲ ಬಿಟ್ಟು ತೆನೆಗೆ ಸಜ್ಜಾಗಿರುತ್ತದೆ.ಒಟ್ಟಾರೆಯಾಗಿ ಈ ಕೆಡ್ಡಸದಿಂದ ಪ್ರಕೃತಿಯ ಸಂರಕ್ಷಣೆಯ ಒಂದೊಳ್ಳೆಯ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಇದೆಲ್ಲವನ್ನೂ ತುಳುವರು ಸಂಭ್ರಮಿಸುವ ಕ್ಷಣ ಕೂಡ ಹೌದು.
ಕೆಡ್ಡಸದ ಮೊದಲ ದಿನ ಅಷ್ಟೊಂದು ವಿಶೇಷತೆಯಿಂದ ಕೂಡಿರೋದಿಲ್ಲವಾದರೂ ಪುರುಷರು ಕತ್ತಿ, ನೊಗ, ಹಾರೆಗಳಿಗೆ ಪ್ರಾರ್ಥಿಸುವ ಕ್ರಮವಿದೆ.ಯಾಕೆಂದರೆ ಮುಂದಿನ ಮೂರು ದಿನ ಕತ್ತಿ , ನೊಗ , ಹಾರೆಗಳು ಸೇರಿದಂತೆ ಕೃಷಿ ಉಪಕರಣಗಳಿಗೆ ಆ ದಿನ ರಜೆ ಕೊಟ್ಟಿಲ್ಲ ಅಂದ್ರೆ ಮುಂದೆ ಆಪತ್ತು ಎದುರಾಗುತ್ತೆ ಅನ್ನೋದು ನಂಬಿಕೆ.ಹೀಗಾಗಿ ತೋಟದ ಕೆಲಸ, ಮರಕಡಿಯುವುದು, ನೆಲ ಅಗೆಯುವುದು,ಗದ್ದೆ ಕೆಲಸ ಇವುಗಳನ್ನ ಮಾಡುವಂತಿಲ್ಲ. ಭೂ ಕುಮಾರಿ ಋತುಮತಿಯಾದಾಗ ಕೃಷಿಕೆಲಸ ಮಾಡಿ ಆಕೆಗೆ ನೋವುಂಟು ಮಾಡಿದರೆ ಆಕೆ ಬಂಜೆಯಾಗುತ್ತಾಳೆ ಎಂಬುವುದು ಅದರ ಹಿನ್ನೆಲೆ ಕೂಡ ಹೌದು..ಒಂದು ವೇಳೆ ಆಕೆ ಬಂಜೆಯಾದರೆ ಮುಂದೆ ಮನುಷ್ಯನ ಬದುಕಿಗೂ ಮಾರಕವಾಗಬಹುದು ಎಂಬ ಅರ್ಥವೂ ಇದೆ.
ಇನ್ನು ಕೆಡ್ಡಸ ಬಂತೆಂದರೆ ಹೆಂಗಸರ ಪಾಲಿಗಂತು ಸಂಭ್ರಮವೋ ಸಂಭ್ರಮ.ಬೆಳಗ್ಗೆ ಬೇಗನೆ ಎದ್ದು ಈ ಆಚರಣೆಗೆ ಸಿದ್ಧವಾಗುತ್ತಾಳೆ. ಮೊದಲನೆ ದಿನ ಬೆಳಗ್ಗೆ ನವಧಾನ್ಯ ಹುರಿದು ಬೆಲ್ಲ ಹಾಗೂ ತೆಂಗಿನಕಾಯಿ ಚೂರುಗಳನ್ನು ಬೆರೆಸಿ ಅಗ್ರದ ಬಾಳೆಲೆಯಲ್ಲಿಟ್ಟು ಭೂ ದೇವಿಗೆ ನಮಿಸುತ್ತಾಳೆ. ಈ ಹುರಿದ ಧಾನ್ಯಗಳಿಗೆ ತುಳುವಿನಲ್ಲಿ ಕೆಡ್ಡಸದ ‘ಕುಡುಅರಿ’ ಅಥವಾ ‘ನನ್ನೆರಿ’ ಎಂದು ಹೆಸರು.ಅದೇ ದಿನ ಮಧ್ಯಾಹ್ನದ ಊಟಕ್ಕೆ ನುಗ್ಗೆ ಪಲ್ಯ ಮತ್ತು ನುಗ್ಗೆ, ಬದನೆ ಸೇರಿಸಿ ಮಾಡಿದ ಪದಾರ್ಥ ವಿಶೇಷ.ಒಟ್ಟಿನಲ್ಲಿ ಸಂತಾನ, ಸಂಪತ್ತು, ಫಲಕ್ಕಾಗಿ ತುಳುವರು ಭೂಮಿ ತಾಯಿಯನ್ನು ವಿಶೇಷವಾಗಿ ಪ್ರಾರ್ಥಿಸಿ ಆಕೆಗೆ ಧನ್ಯವಾದ ಅರ್ಪಣೆ ಮಾಡೋ ದಿನವನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಾರೆ.
ಆದರೆ ವಿಪರ್ಯಾಸವೆಂದರೆ ಇದೀಗ ಕೃಷಿ ಭೂಮಿಯೆಲ್ಲ ನಶಿಸುತ್ತಾ ಬರುತ್ತಿದೆ.ಭೂಮಿಯ ಹೆಚ್ಚಿನ ಭಾಗ ಪಟ್ಟಣಮಯವೇ ಆಗಿದೆ.ಇಂದಿನ ಮಕ್ಕಳು ಇಂತಹ ಭೂಮಿ ಪೂಜೆಯನ್ನ ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ.ಕಂಪ್ಯೂಟರ್,ಮೊಬೈಲ್ ಸೇರಿದಂತೆ ಆಧುನಿಕ ತಂತ್ರಜ್ಞಾನಗಳಿಗೆ ಮರುಳಾಗುತ್ತಿರುವ ಈ ಸಂದರ್ಭದಲ್ಲಿ ಈ ಬಗ್ಗೆ ಮಕ್ಕಳಿಗೆ ತಿಳಿ ಹೇಳುವ ಕೆಲಸಗಳತ್ತ ಹೆಚ್ಚಿನ ಒತ್ತು ನೀಡಬೇಕಾಗಿದೆ.ಹೀಗಾಗಿ ನಾವು 10-20 ವರ್ಷಗಳ ಹಿಂದೆ ಬಾಲ್ಯದಲ್ಲಿ ನೋಡಿದಂತಹ ಆಚರಣೆಗಳ ಬಗೆಯನ್ನು ಇಂದಿನ ಮಕ್ಕಳಿಗೂ ಅರ್ಥ ಮಾಡಿಸಿ ಅದನ್ನು ಮುಂದುವರಿಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ.ಸಾಧ್ಯವಾದಷ್ಟು ಈ ನಮ್ಮ ತುಳುನಾಡಿನ ಆಚರಣೆಗಳನ್ನು ಉಳಿಸಿ ಬೆಳೆಸುವ ಬಗ್ಗೆ ಯೋಚನೆ ಮಾಡೋಣ ಅಲ್ವೇ? ಏನಂತೀರಾ?..