ನ್ಯೂಸ್ ನಾಟೌಟ್: ಫೆಬ್ರವರಿ 10 ರಿಂದ ಮಾರ್ಚ್ 7ರ ವರೆಗೆ ನಡೆಯುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ನೇಮಕಾತಿ ಪರೀಕ್ಷೆಯಲ್ಲಿ ಇದೇ ಮೊದಲ ಬಾರಿಗೆ ಕನ್ನಡ, ತೆಲುಗು, ತಮಿಳು ಸೇರಿ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಇದರಿಂದ ಕರ್ನಾಟಕದ ಅಭ್ಯರ್ಥಿಗಳು ಮೊದಲ ಆದ್ಯತೆಯಾಗಿ ಕನ್ನಡದಲ್ಲಿಯೇ ಪರೀಕ್ಷೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ವರದಿ ತಿಳಿಸಿದೆ.
ಕೇಂದ್ರ ಸಶಸ್ತ್ರ ಪಡೆಗಳಾದ ಸಿಆರ್ಪಿಎಫ್, ಬಿಎಸ್ಎಫ್ ಮತ್ತು ಸಿಐಎಸ್ಎಫ್, ಐಟಿಬಿಪಿ, ಎಸ್ಎಸ್ಬಿ ಮತ್ತು ಎನ್ಎಸ್ಜಿ ಹುದ್ದೆಗಳ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಫೆಬ್ರವರಿ 10 ರಿಂದ ಮಾರ್ಚ್ 7 ರ ವರೆಗೆ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ದೇಶಾದ್ಯಂತ 128 ನಗರಗಳಲ್ಲಿ ಸುಮಾರು 48 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಭಾಷಾ ಸಮಸ್ಯೆ ಮತ್ತು ದೇಶದ ಎಲ್ಲ ಭಾಗಗಳಿಂದ ಸಶಸ್ತ್ರ ಪಡೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕೇಂದ್ರ ಸರ್ಕಾರ ಇಂಗ್ಲಿಷ್, ಹಿಂದಿಯಲ್ಲಿದ್ದ ಪರೀಕ್ಷೆಯನ್ನು 13 ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ಮಾಡಿಕೊಡಲು ನಿರ್ಧರಿಸಿತು. ಪ್ರಧಾನಿ ನರೇಂದ್ರ ಮೋದಿ ಅವರ ಆಶಯ, ಗೃಹ ಸಚಿವ ಅಮಿತ್ ಶಾ ಅವರ ಶಿಫಾರಸಿನ ಮೇರೆಗೆ ಗೃಹ ಸಚಿವಾಲಯವು ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಗೆ ಅವಕಾಶ ನೀಡಿದೆ.
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಯುವಕರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮತ್ತು ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸಲು ಗೃಹ ಸಚಿವರ ಮಾರ್ಗದರ್ಶನದ ಮೇರೆಗೆ ಈ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.