ನ್ಯೂಸ್ ನಾಟೌಟ್ : ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಾಗಲೋ, ಅಥವಾ ಎಲ್ಲಾದರೂ ಹೋಗುವಾಗಲೋ ಹೆಲ್ಮೆಟ್ ಹಾಕೋದಿಲ್ವ? ಹಾಗಾದರೆ ಇನ್ಮುಂದೆ ನೀವು ಹೆಲ್ಮೆಟ್ ಇಲ್ಲದೇ ಮಕ್ಕಳನ್ನು ಕರ್ಕೊಂಡು ಹೋದ್ರೆ ಪೊಲೀಸರು ಕ್ರಮ ತೆಗೆದುಕೊಳ್ಳೋದು ಗ್ಯಾರಂಟಿ.ಯಾಕೆಂದ್ರೆ ‘ಆರು ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯವಿದ್ದು, ಈ ನಿಯಮವನ್ನು ಪಾಲಿಸಬೇಕು’ ಎಂದು ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ.
ನಗರದ ಯಾವುದೇ ಶಾಲೆ– ಕಾಲೇಜು ಬಳಿ ಸಂಚಾರ ನಿಯಮ ಉಲ್ಲಂಘನೆ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಹಲವು ಪೋಷಕರು, ಮಕ್ಕಳನ್ನು ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಇಂಥ ಪೋಷಕರಿಗೆ ಪೊಲೀಸರು, ‘6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯವಿದೆ. ಇಂದಿನಿಂದಲೇ ಮಕ್ಕಳಿಗೆ ಹೆಲ್ಮೆಟ್ ಹಾಕಿಸಿ’ ಎಂದು ಸೂಚನೆ ನೀಡುತ್ತಿದ್ದಾರೆ ಜತೆಗೆ ಇನ್ನು ಮುಂದಿನ ದಿನಗಳಲ್ಲಿ ಈ ರೂಲ್ಸ್ ಪಾಲಿಸದೇ ಇದ್ದರೆ ಶಿಸ್ತು ಕ್ರಮದ ಬಗ್ಗೆಯೂ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ.
ಶಾಲೆ–ಕಾಲೇಜು ಬಳಿ ಹೆಲ್ಮೆಟ್ ರಹಿತ ಚಾಲನೆ, ಪರವಾನಗಿ ಇಲ್ಲದೇ ಚಾಲನೆ, ಪಾದಚಾರಿ ಮಾರ್ಗದಲ್ಲಿ ಸವಾರಿ ಸೇರಿದಂತೆ ವಿವಿಧ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಪೊಲೀಸರು ಪ್ರಕರಣಗಳನ್ನೂ ದಾಖಲಿಸಿ, ದಂಡ ವಸೂಲಿ ಮಾಡುತ್ತಿದ್ದಾರೆ.ಇನ್ನು 6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಎಂಬುದು ಹೊಸ ನಿಯಮವೇನಲ್ಲ.ಕಾಯ್ದೆಯಲ್ಲಿ ಮೊದಲಿನಿಂದಲೂ ಇದೆ. ಆದರೆ, ಜನರು ಗಂಭೀರವಾಗಿ ಇದನ್ನು ಪರಿಗಣಿಸುತ್ತಿಲ್ಲ’ ಎಂದು ಸಂಚಾರ ವಿಭಾಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಬಹುತೇಕ ಅಪಘಾತಗಳಲ್ಲಿ ತಲೆಗೆ ಪೆಟ್ಟು ಬಿದ್ದು ಸವಾರರು ಮೃತಪಡುತ್ತಿದ್ದಾರೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್ ಹಾಕಿಸುವುದು ಒಳ್ಳೆಯದು. ಈ ಬಗ್ಗೆ ಪೋಷಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.