ನ್ಯೂಸ್ ನಾಟೌಟ್: ಕಳೆದ ಹತ್ತು ವರ್ಷಗಳಿಂದ ಸದ್ದಿಲ್ಲದೆ ಮಲಗಿದ್ದ ನಕ್ಸಲ್ ಚಟುವಟಿಕೆ ಮತ್ತೆ ಗರಿಗೆದರಿದೆ. ಸಕ್ರಿಯವಾಗುವ ಸೂಚನೆ ದೊರೆತ ಬೆನ್ನಲ್ಲೇ ನಕ್ಸಲ್ ನಿಗ್ರಹ ದಳದ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಉಡುಪಿ ಭಾಗದಲ್ಲಿ ನಕ್ಸಲರ್ ತಮ್ಮ ಚಟುವಟಿಕೆಯನ್ನು ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.
ಬೈಂದೂರು ತಾಲೂಕಿನ ಕೊಲ್ಲೂರು, ಮುದೂರು, ಜಡ್ಕಲ್, ಬೆಳ್ಕಲ್, ಗ್ರಾಮಗಳ ಮನೆಗಳಿಗೆ ನಕ್ಸಲರು ಭೇಟಿ ನೀಡಿದ್ದಾರೆ ಎನ್ನಲಾಗುತ್ತಿದೆ. ಕೈಯಲ್ಲಿ ಶಸ್ತ್ರ ಹಿಡಿದುಕೊಂಡು ಹಸಿರು ಬಣ್ಣದ ಬಟ್ಟೆ ತೊಟ್ಟುಕೊಂಡು ಬಂದಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ ಎನ್ನಲಾಗಿದೆ.
ಇದೀಗ ಸಂಶಯಾಸ್ಪದ ಸ್ಥಳಗಳಲ್ಲಿ ಪೊಲೀಸರ ತಲಾಶ್ ಆರಂಭವಾಗಿದೆ. ಇತ್ತೀಚೆಗೆ ಕೇರಳದಲ್ಲಿ ನಕ್ಸಲ್ ಚಟುವಟಿಕೆಗೆ ಬ್ರೇಕ್ ಬಿದ್ದ ಹಿನ್ನೆಲೆಯಲ್ಲಿ ಕರ್ನಾಟಕದತ್ತ ನಕ್ಸಲರು ಕಾಲಿಟ್ಟಿರುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. 19 ವರ್ಷಗಳ ಹಿಂದೆ ಫೆ.9ರಂದು ನಕ್ಸಲ್ ನಾಯಕ ಸಾಕೇತ್ ರಾಜನ್ ಹತ್ಯೆಗೆ ಪ್ರತೀಕಾರ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಪಣ ತೊಟ್ಟಿರಬಹುದು ಎನ್ನಲಾಗುತ್ತಿದೆ.
ನಕ್ಸಲ್ ನಾಯಕ ಸಾಕೇತ್ ರಾಜನ್ ಮೃತಪಟ್ಟು ಇಂದಿಗೆ 16 ವರ್ಷಗಳೇ ಕಳೆದಿದೆ. ಆದರೂ ಈ ಭಾಗದಲ್ಲಿ ಇನ್ನೂ ರಸ್ತೆ, ವಿದ್ಯುತ್, ನೀರು ಮೂಲಭೂತ ಸೌಲಭ್ಯಗಳು ಸಿಕ್ಕಿಲ್ಲ. ಎಷ್ಟೋ ಕುಟುಂಬಗಳು ಇನ್ನೂ ಹಕ್ಕು ಪತ್ರ ಸಿಗದೇ ಅತಂತ್ರವಾಗಿವೆ. ಈ ಭಾಗದಲ್ಲಿ ಜನರಿಗೆ ಸೌಲಭ್ಯ ನೀಡಿ ನಕ್ಸಲ್ ಚಟುವಟಿಕೆಗಳನ್ನು ನಿಯಂತ್ರಿಸಬೇಕಿದೆ.