ನ್ಯೂಸ್ ನಾಟೌಟ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸದಾ ಒಂದಿಲ್ಲೊಂದು ಎಡವಟ್ಟುಗಳನ್ನು ಮಾಡುತ್ತಲೇ ಸುದ್ದಿಯಾಗುತ್ತಿದ್ದಾರೆ. ಈ ಹಿಂದೆ ಬಟಾಟೆಯಿಂದ ಚಿನ್ನ ತೆಗೆಯಬಹುದು ಎಂಬ ಹೇಳಿಕೆ ಭಾರಿ ವೈರಲ್ ಆಗಿತ್ತು. ಇದೀಗ ಅಂತಹದ್ದೇ ಒಂದು ವಿವಾದಾತ್ಮಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗಿದೆ.
ಭಾರತ್ ಜೋಡೋ ನ್ಯಾಯ ಯಾತ್ರೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ.ರಾಹುಲ್ ಗಾಂಧಿಯವರು ರೋಡ್ ಶೋ ನಡುವೆ ನಾಯಿಗೆ ಬಿಸ್ಕೆಟ್ ತಿನ್ನಿಸುತ್ತಿರುವುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು. ಆ ಸಮಯದಲ್ಲಿ, ನಾಯಿ ಬಿಸ್ಕತ್ತನ್ನು ತಿನ್ನಲು ನಿರಾಕರಿಸಿದಾಗ, ಅವರು ಅದೇ ಬಿಸ್ಕತ್ತನ್ನು ತನ್ನ ಕಾರ್ಯಕರ್ತನಿಗೆ ನೀಡಿರುವ ವಿಡಿಯೋ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ರಾಹುಲ್ ಗಾಂಧಿ ಅವರ ರೋಡ್ ಶೋ ವೇಳೆ ಅವರ ಜತೆಗಿದ್ದ ನಾಯಿಗೆ ಬಿಸ್ಕತ್ತು ನೀಡಿದ್ದರು. ಆದರೆ ಆ ನಾಯಿ ತಿನ್ನಲು ನಿರಾಕರಿಸಿದೆ. ಅದೇ ಸಮಯದಲ್ಲಿ ಕಾರ್ಯಕರ್ತರೊಬ್ಬರು ರಾಹುಲ್ ಗಾಂಧಿಯನ್ನು ಮಾತನಾಡಿಸಿದರು. ಆಗ ರಾಹುಲ್ ನಾಯಿಗೆ ಹಾಕಿದ್ದ ಬಿಸ್ಕತ್ತಲ್ಲೇ ಒಂದು ಬಿಸ್ಕತ್ತನ್ನು ತೆಗೆದು ಕಾರ್ಯಕರ್ತನಿಗೂ ನೀಡಿದ್ದರು. ಅದಾದ ಬಳಿಕ ಕಾರ್ಯಕರ್ತನ ಬಳಿ ನಗುತ್ತಲೇ ಮಾತು ಆರಂಭಿಸಿದ್ದರು.
ಸದ್ಯ ಈ ವಿಡಿಯೋವನ್ನು ಬಿಜೆಪಿ ಐಟಿ ಸೆಲ್ನ ಅಮಿತ್ ಮಾಳವೀಯ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬೂತ್ ಏಜೆಂಟರನ್ನು ನಾಯಿಗಳಿಗೆ ಹೋಲಿಸಿದ್ದರು. ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಅಧ್ಯಕ್ಷರು ತನ್ನ ಕಾರ್ಯಕರ್ತನನ್ನು ನಾಯಿಯಂತೆ ನಡೆಸಿಕೊಂಡರೆ ಅಂತಹ ಪಕ್ಷವು ಕಣ್ಮರೆಯಾಗುವುದು ಪಕ್ಕಾ ಎಂದು ಮಾಳವೀಯ ಪ್ರತಿಕ್ರಿಯೆ ನೀಡಿದ್ದಾರೆ.
ಪಕ್ಷದ ಕಾರ್ಯಕರ್ತರನ್ನು ನಡೆಸಿಕೊಂಡ ರೀತಿ ವ್ಯಾಪಕ ಟೀಕೆಗೆ ಕಾರಣವಾಗಿದ್ದು, ಇದು ತನ್ನದೇ ಸದಸ್ಯರ ಬಗ್ಗೆ ನಾಯಕರು ತೋರಿಸುವ ಆಗೌರವ ಹಾಗು ದುರ್ವರ್ತನೆ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ. ಆತಿಥ್ಯಕ್ಕೆ ಅತೀ ಹೆಚ್ಚಿನ ಬೆಲೆ ಕೊಡುವ ಭಾರತೀಯರಿಗಿದು ಸಹಿಸಲು ಕಷ್ಟಸಾಧ್ಯ ಎಂದವರು ಬರೆದುಕೊಂಡಿದ್ದಾರೆ. ಈ ಘಟನೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಪಕ್ಷದ ಕಾರ್ಯಕರ್ತರನ್ನು ನಡೆಸಿಕೊಂಡ ವಿಚಾರವನ್ನು ಮುನ್ನೆಲೆಗೆ ತಂದಿದೆ. ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತನಿಗೆ ನಾಯಿ ತಿರಸ್ಕರಿಸಿದ ಬಿಸ್ಕತ್ತನ್ನು ನೀಡಿದ್ದಾರೆ. ಇದು ಅವರ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಮತ್ತು ಮತದಾರರಿಗೆ ನೀಡುವ ಗೌರವವೇ ಎಂದು ಬಿಜೆಪಿ ನಾಯಕಿ ಪಲ್ಲವಿ ಟೀಕಿಸಿದ್ದಾರೆ.
ಪಲ್ಲವಿ ಅವರ ಟ್ವೀಟ್ಗೆ ಹಿಮಂತ ಬಿಸ್ವಾ ಶರ್ಮಾ ಕೂಡ ಪ್ರತಿಕ್ರಿಯಿಸಿದ್ದಾರೆ. ರಾಹುಲ್ ಗಾಂಧಿ ಮಾತ್ರವಲ್ಲ,ಅವರ ಇಡೀ ಕುಟುಂಬವೂ ನನಗೆ ಆ ಬಿಸ್ಕತ್ತನ್ನು ತಿನ್ನಿಸಲು ಸಾಧ್ಯವಾಗಲಿಲ್ಲ. ನಾನು ಹೆಮ್ಮೆಯ ಅಸ್ಸಾಮಿ ಮತ್ತು ಭಾರತೀಯ. ನಾನು ಅದನ್ನು ತಿನ್ನಲು ನಿರಾಕರಿಸಿದೆ ಮತ್ತು ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.