ನ್ಯೂಸ್ ನಾಟೌಟ್: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಸಾರಿಗೆ ಬಸ್ಗಳಲ್ಲಿ ಮಹಿಳೆಯರ ಓಡಾಟ ಹೆಚ್ಚಾಗಿದೆ. ಕೆಲವು ಕಡೆ ಸೀಟು ಸಿಗದೆ ಜನ ಪರದಾಡಿದ ಪರಿಸ್ಥಿತಿಯೂ ನಿರ್ಮಾಣಗೊಂಡಿತ್ತು. ಇದೀಗ ಈ ಸಮಸ್ಯೆಯನ್ನು ಬಗೆ ಹರಿಸುವುದಕ್ಕಾಗಿ ಕೆಎಸ್ ಆರ್ಟಿಸಿ ಹೊಸದಾಗಿ 800 ಬಸ್ ಸೇರ್ಪಡೆಗೊಳಿಸಿದೆ. ಸೋಮವಾರ ಮೊದಲ ಹಂತದಲ್ಲಿ ಹೊಸ ವಿನ್ಯಾಸದ 100 ಅಶ್ವಮೇಧ ಕ್ಲಾಸಿಕ್ ಬಸ್ಗಳ (Ashwamedha Bus) ಸಂಚಾರಕ್ಕೆ ಸಿಎಂ ಸಿದ್ದರಾಮಯ್ಯ ಅವರು ಹಸಿರು ನಿಶಾನೆ ತೋರಿದ್ದಾರೆ.
ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಆರಂಭವಾದ ದಿನದಿಂದ ಸಾರಿಗೆ ಬಸ್ಗಳು ತುಂಬಿ ತುಳುಕುತ್ತಿವೆ. ನಿತ್ಯ ಪ್ರಯಾಣಿಕರ ಗೋಳಾಟ, ನಿರ್ವಾಹಕರ ಪರದಾಟ, ಗೊಂದಲ-ಗಲಾಟೆಗಳು ಸಾರಿಗೆ ಸಂಸ್ಥೆಗೆ ತಲೆನೋವು ತರಿಸಿದೆ. ಈ ಸಮಸ್ಯೆಗೆ ಪರಿಹಾರವಾಗಿ ರಾಜ್ಯ ಸರ್ಕಾರ ʼಅಶ್ವಮೇಧ ಯಾಗʼ ಶುರುಮಾಡಿದ್ದು, ಇದರಿಂದ ಶಕ್ತಿ ಯೋಜನೆಯ ಒತ್ತಡಕ್ಕೆ ಪರಿಹಾರ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ. ಶಕ್ತಿ ಯೋಜನೆಯಡಿ ಐರಾವತ ಕ್ಲಬ್ ಕ್ಲಾಸ್, ಅಂಬಾರಿಯಂತಹ ವಿಶೇಷ ಸ್ಲೀಪರ್ ಎಸಿ ಬಸ್ಗಳನ್ನು ಹೊರತುಪಡಿಸಿ ಇತರ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದೆ. ಅದರಂತೆ, ಈ ಹೊಸ ವಿನ್ಯಾಸದ ನಾನ್ ಎಸಿ ಅಶ್ವಮೇಧ ಕ್ಲಾಸಿಕ್ ಅಶ್ವಮೇಧ – ಪಾಯಿಂಟ್ ಟು ಪಾಯಿಂಟ್ ಎಕ್ಸ್ಪ್ರೆಸ್ ಬಸ್ಗಳಲ್ಲೂ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದಾಗಿದೆ.